ಗೆಲುವಿನತ್ತ ದಾಪುಗಾಲಿಡುತ್ತಿರುವ ಶ್ರೀಲಂಕಾ | ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್
Photo: PTI
ಚಟ್ಟೋಗ್ರಾಮ್ : ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ, ವಿಜಯಕ್ಕೆ 511 ರನ್ಗಳ ಗುರಿ ಪಡೆದ ಬಾಂಗ್ಲಾದೇಶವು ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 268 ರನ್ಗಳನ್ನು ಗಳಿಸುವಷ್ಟರಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿದೆ. ಪಂದ್ಯದ ಕೊನೆಯ ಐದನೇ ಹಾಗೂ ಕೊನೆಯ ದಿನವಾದ ಬುಧವಾರ ಅದು ಗೆಲುವಿಗೆ 243 ರನ್ಗಳನ್ನು ಗಳಿಸಬೇಕಾಗಿದೆ.
ಶ್ರೀಲಂಕಾದ ವೇಗಿಗಳಾದ ಲಹಿರು ಕುಮಾರ, ಎಡಗೈ ಸ್ಪಿನ್ನರ್ ಪ್ರಬಾತ್ ಜಯಸೂರ್ಯ ಮತ್ತು ಅರೆಕಾಲಿಕ ಬೌಲರ್ ಕಮಿಂಡು ಮೆಂಡಿಸ್ ಎದುರಾಳಿ ತಂಡದ ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು.
ನಾಲ್ಕನೇ ದಿನದಾಟ ಮುಗಿದಾಗ, ಮೆಹಿದಿ ಹಸನ್ 44ರಲ್ಲಿ ಮತ್ತು ತೈಜುಲ್ ಇಸ್ಲಾಮ್ 10ರಲ್ಲಿ ಕ್ರೀಸ್ನಲ್ಲಿದ್ದಾರೆ.
ಮೋಮಿನುಲ್ ಹಕ್ ಈ ಸರಣಿಯಲ್ಲಿ ಎರಡನೇ ಅರ್ಧ ಶತಕ ಗಳಿಸಿದರು. ಅದರಿಂದಾಗಿ, ಡಿಸೆಂಬರ್ ನಂತರದ ಐದು ಟೆಸ್ಟ್ ಇನಿಂಗ್ಸ್ಗಳಲ್ಲಿ ಬಾಂಗ್ಲಾದೇಶವು ಮೊದಲ ಬಾರಿಗೆ 200ರ ಗಡಿಯನ್ನು ದಾಟಿತು. ಅವರು 56 ಎಸೆತಗಳಲ್ಲಿ 50 ರನ್ಗಳನ್ನು ಗಳಿಸಿ ನಿರ್ಗಮಿಸಿದರು.
ಬಾಂಗ್ಲಾದೇಶವು ಭೋಜನ ವಿರಾಮದವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ ಎಂಟು ಓವರ್ಗಳನ್ನು ಆಡಿತು. ಆದರೆ ಭೋಜನ ವಿರಾಮದ ಬಳಿಕ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಳ್ಳಲು ಆರಂಭಿಸಿತು. ಮಹ್ಮುದೂಲ್ ಹಸನ್ 24 ರನ್ಗಳನ್ನು ಮಾಡಿದರೆ, ನಾಯಕ ಹುಸೈನ್ ಶಾಂಟೊ (20) ಈ ಸರಣಿಯಲ್ಲಿ ಮೊದಲ ಬಾರಿಗೆ ಎರಡಂಕಿಯ ಮೊತ್ತವನ್ನು ತಲುಪಿದರು.
ಶಾಕಿಬ್ ಅಲ್ ಹಸನ್ (36) ಮತ್ತು ಲಿಟೊನ್ ದಾಸ್ (38) 16 ಓವರ್ಗಳನ್ನು ಆಡಿ 5ನೇ ವಿಕೆಟ್ಗೆ 61 ರನ್ಗಳನ್ನು ಸೇರಿಸಿದರು.
ಬೆಳಗ್ಗೆ ಶ್ರೀಲಂಕಾ ತನ್ನ ಎರಡನೇ ಇನಿಂಗ್ಸನ್ನು 6 ವಿಕೆಟ್ಗಳ ನಷ್ಟಕ್ಕೆ 102 ರನ್ ಇದ್ದಲ್ಲಿಂದ ಮುಂದುವರಿಸಿತು. ಆ್ಯಂಜೆಲೊ ಮ್ಯಾಥ್ಯೂಸ್ ತನ್ನ 41ನೇ ಅರ್ಧ ಶತಕ ಗಳಿಸಿದರು. ಇದು ಈ ಸರಣಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ. ಮ್ಯಾಥ್ಯೂಸ್ 56 ರನ್ ಗಳಿಸಿ ಶಾಕಿಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದ ಸ್ವಲ್ಪವೇ ಹೊತ್ತಿನ ಬಳಿಕ, ಶ್ರೀಲಂಕಾವು ತನ್ನ ದ್ವಿತೀಯ ಇನಿಂಗ್ಸನ್ನು 7 ವಿಕೆಟ್ಗೆ 157 ರನ್ಗಳಿಗೆ ಡಿಕ್ಲೇರ್ ಮಾಡಿತು. ಆಗ ಪ್ರಬಾತ್ ಜಯಸೂರ್ಯ 28 ರನ್ ಗಳಿಸಿ ಕ್ರೀಸ್ನಲ್ಲಿದ್ದರು.
ಶ್ರೀಲಂಕಾವು ತನ್ನ ಮೊದಲ ಇನಿಂಗ್ಸ್ನಲ್ಲಿ 531 ರನ್ಗಳನ್ನು ಗಳಿಸಿತ್ತು.