ಕಿವೀಸ್ ಬೌಲಿಂಗ್ ಗೆ ತತ್ತರಿಸಿದ ಶ್ರೀಲಂಕಾ 171 ರನ್ ಗೆ ಆಲೌಟ್
ಕುಸಾಲ್ ಪೆರೆರಾ ವೇಗದ ಅರ್ಧಶತಕ , ಟ್ರೆಂಟ್ ಬೌಲ್ಟ್ ಗೆ 3 ವಿಕೆಟ್
Photo : cricketworldcup.com
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ಶ್ರೀಲಂಕಾ ತಂಡ ನ್ಯೂಝಿಲ್ಯಾಂಡ್ ಗೆಲುವಿಗೆ 172 ರನ್ ಅಲ್ಪ ಗುರಿ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡು. ಶ್ರೀಲಂಕಾಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಕಿವೀಸ್ ವಿರುದ್ದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿತು. ಪರಿಣಾಮ 46.4 ಓವರ್ ನಲ್ಲಿ 171 ರನ್ ಗೆ ಲಂಕನ್ನರನ್ನು ಆಲೌಟ್ ಮಾಡುವಲ್ಲಿ ನ್ಯೂಝಿಲ್ಯಾಂಡ್ ಯಶಸ್ವಿ ಆಯಿತು.
ಕಿವೀಸ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಲಂಕಾ ಕೇವಲ 3 ರನ್ ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಪಾತುಮ್ ನಿಸಾಂಕ 2 ರನ್ ಗೆ ಸೌಥಿ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟ್ ಆದರು. ಇದಾದ ಬಳಿಕ ನಾಯಕ ಕುಸಾಲ್ ಮೆಂಡಿಸ್ ಹಾಗೂ ಸಮರವಿಕ್ರಮ 6, 1 ರನ್ ಗಳಿಸಿ ಕ್ರಮವಾಗಿ ಒಬ್ಬರ ಹಿಂದೆ ಒಬ್ಬರಂತೆ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕಿವೀಸ್ ಸಂಘಟಿತ ಬೌಲಿಂಗ್ ಗೆ ತಕ್ಕ ಮಟ್ಟಿಗೆ ಪ್ರತಿರೋಧ ತೋರಿದ ಓಪನರ್ ಕುಸಾಲ್ ಪೆರೆರಾ 9 ಬೌಂಡರಿ 2 ಸಿಕ್ಸರ್ ಸಹಿತ ಸ್ಪೋಟಕ 51 ರನ್ ಗಳಿಸಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ ಅವರಿಗೆ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುದನ್ನು ತಡೆಯಲಾಗಲಿಲ್ಲ , ಅವರು ಫರ್ಗ್ಯುಸನ್ ಎಸೆತದಲ್ಲಿ ಸಾಂಟ್ನರ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಮುಂದೆ ಬಂದ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಚರಿತ್ ಅಸಲಂಕ 8 , ಮಾಥ್ಯೂಸ್ 16 ಹಾಗೂ ಧನಂಜಯ ಡಿಸಿಲ್ವ 19 ರನ್ ಗಳಿಸಿದರು. ಕಡೇ ಗಳಿಗೆಯಲ್ಲಿ ಬ್ಯಾಟ್ ಬೀಸಿದ ಕರುಣರತ್ನೆ 6 , ದುಶ್ಮಂತ ಚಮೀರ 1 , ಮಹೇಶ ತೀಕ್ಷಣ 39 ರನ್ ಕೊಡುಗೆ ನೀಡಿದರು. ಅವರಿಗೆ ಸಾಥ್ ನೀಡಿದ್ದ ದಿಲ್ಶನ್ ಮದುಶಂಕ 19 ರನ್ ಪೇರಿಸಿದರು.
ಹತ್ತನೇ ವಿಕೆಟ್ ಗೆ 43 ರನ್ ಜೊತೆಯಾಟ ನೀಡಿದ ತೀಕ್ಷಣ-ಮದುಶಂಕ ಜೋಡಿ ತಂಡವನ್ನು ನೂರೈವತ್ತು ದಾಟಿಸುವಲ್ಲಿ ಉತ್ತಮ ಆಟ ಪ್ರದರ್ಶಿಸಿದರು.
ಲಂಕನ್ನರನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಉತ್ತಮ ಪ್ರದರ್ಶನ ತೋರಿದ ನ್ಯೂಝಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ ಸಾಂಟ್ನರ್, ರಚಿನ್ ಹಾಗೂ ಫರ್ಗ್ಯುಸನ್ 2 ವಿಕೆಟ್ ಹಾಗೂ ಸೌಥಿ ಒಂದು ವಿಕೆಟ್ ಕಬಳಿಸಿದರು.