ಮೂರನೇ ಏಕದಿನ ಪಂದ್ಯ: ಶ್ರೀಲಂಕಾ ತಂಡಕ್ಕೆ ಭರ್ಜರಿ ಜಯ
ಸರಣಿ ಗೆದ್ದ ನ್ಯೂಝಿಲ್ಯಾಂಡ್
PC : PTI
ಆಕ್ಲಂಡ್: ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 140 ರನ್ ಅಂತರದಿಂದ ಭರ್ಜರಿ ಅಂತರದಿಂದ ಜಯ ದಾಖಲಿಸಿದೆ. ಆದರೆ ಆತಿಥೇಯ ಕಿವೀಸ್ ತಂಡವು 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಪ್ರವಾಸಿ ಲಂಕಾ ತಂಡವು ಕಿವೀಸ್ ವಿರುದ್ಧ ನಡೆದಿರುವ ಟಿ-20 ಸರಣಿಯನ್ನು ಕೂಡ 1-2 ಅಂತರದಿಂದ ಸೋಲುಂಡಿತ್ತು.
ಏಕದಿನ ಸರಣಿಯು ಪಾಕಿಸ್ತಾನ ಹಾಗೂ ದುಬೈನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ತಯಾರಿಗೆ ಉಭಯ ತಂಡಗಳಿಗೆ ಮುಖ್ಯವಾಗಿತ್ತು.
ಈಡನ್ ಪಾರ್ಕ್ನಲ್ಲಿ ಶನಿವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 290 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಒಂದು ಹಂತದಲ್ಲಿ 21 ರನ್ಗೆ 5 ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದ್ದ ಕಿವೀಸ್ ಪಡೆಯು ಅಂತಿಮವಾಗಿ 29.4 ಓವರ್ಗಳಲ್ಲಿ ಕೇವಲ 150 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಶ್ರೀಲಂಕಾದ ಬೌಲಿಂಗ್ ವಿಭಾಗದಲ್ಲಿ ಅಸಿತ ಫೆರ್ನಾಂಡೊ, ಇಶಾನ್ ಮಾಲಿಂಗ ಹಾಗೂ ಮಹೀಶ್ ತೀಕ್ಷಣ ತಲಾ ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. ಫೆರ್ನಾಂಡೊ ಹೊಸ ಚೆಂಡಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 26 ರನ್ಗೆ 3 ವಿಕೆಟ್ಗಳನ್ನು ಉರುಳಿಸಿದರು.
ನ್ಯೂಝಿಲ್ಯಾಂಡ್ ತಂಡವು ಮೊದಲ 7 ಓವರ್ಗಳಲ್ಲಿ ಅಗ್ರ ಸರದಿಯ ಐವರು ಬ್ಯಾಟರ್ಗಳನ್ನು ಕಳೆದುಕೊಂಡಿತು.
ಮಾರ್ಕ್ ಚಾಪ್ಮನ್ 81 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ಗಳ ಸಹಿತ 81 ರನ್ ಗಳಿಸಿ ತಂಡ ಅತಿ ದೊಡ್ಡ ಅಂತರದಿಂದ ಸೋಲುವುದನ್ನು ತಪ್ಪಿಸಿದರು. ನ್ಯೂಝಿಲ್ಯಾಂಡ್ನ 3ನೇ ಕ್ರಮಾಂಕದ ಬ್ಯಾಟರ್ ಚಾಪ್ಮನ್ ಕೊನೆಯ ಬ್ಯಾಟರ್ ಆಗಿ ಪೆವಿಲಿಯನ್ ಸೇರಿದರು. ಚಾಪ್ಮನ್ ರನ್ನು ತೀಕ್ಷಣ(3-35)ಕ್ಲೀನ್ ಬೌಲ್ಡ್ ಮಾಡಿದರು.
ಅಗ್ರ ಸರದಿಯ ಆರು ಬ್ಯಾಟರ್ಗಳ ಪೈಕಿ ಚಾಪ್ಮನ್ ಮಾತ್ರ ಎರಡಂಕೆ ಸ್ಕೋರ್ ದಾಟಿದರೆ, ಇಬ್ಬರು ಒಂದಂಕಿ ಸ್ಕೋರ್ ಗಳಿಸಿದರೆ, ಮೂವರು ಆಟಗಾರರು ಸೊನ್ನೆ ಸುತ್ತಿದರು.
ಶ್ರೀಲಂಕಾದ ಇನಿಂಗ್ಸ್ನಲ್ಲಿ ಪಥುಮ್ ನಿಸ್ಸಾಂಕ 42 ಎಸೆತಗಳಲ್ಲಿ 66 ರನ್ ಕೊಡುಗೆ ನೀಡಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಿಸ್ಸಾಂಕ ಗಾಯಗೊಂಡು ನಿವೃತ್ತಿಯಾಗುವ ಮೊದಲು 31 ಎಸೆತಗಳಲ್ಲಿ 50 ರನ್ ಪೂರೈಸಿದರು. ನಿಸ್ಸಾಂಕ ಕ್ರೀಸ್ನಲ್ಲಿರುವ ತನಕ ಶ್ರೀಲಂಕಾ ತಂಡವು 10 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿದೆ.
ಔಟಾಗದೆ 50 ರನ್ ಗಳಿಸಿದ್ದ ನಿಸ್ಸಾಂಕ 34ನೇ ಓವರ್ನಲ್ಲಿ ಮತ್ತೆ ಬ್ಯಾಟಿಂಗ್ಗೆ ಇಳಿದರು. ತನ್ನ ಮೊತ್ತಕ್ಕೆ 16 ರನ್ ಸೇರಿಸಿ ಔಟಾದರು. ನಿಸ್ಸಾಂಕ ಅವರ 42 ಎಸೆತಗಳ ಇನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ಗಳಿದ್ದವು.
ಶ್ರೀಲಂಕಾದ ಬ್ಯಾಟಿಂಗ್ ವಿಭಾಗದಲ್ಲಿ ಮಹತ್ವದ ಸುಧಾರಣೆಯಾಗಿದ್ದು, ಕುಸಾಲ್ ಮೆಂಡಿಸ್ 48 ಎಸೆತಗಳಲ್ಲಿ 54 ರನ್ ಗಳಿಸಿದ್ದಾರೆ. ಜನಿತ್ ಲಿಯನಗೆ 52 ಎಸೆತಗಳಲ್ಲಿ 53 ರನ್ ಕಲೆ ಹಾಕಿದರು. ಕಮಿಂದು ಮೆಂಡಿಸ್ 46 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ತಂಡದ ಪರ ಮ್ಯಾಟ್ ಹೆನ್ರಿ(4-55)ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಿದ್ದು, 150 ವಿಕೆಟ್ಗಳ ಮೈಲಿಗಲ್ಲು ತಲುಪಿದರು. ಸರಣಿಯಲ್ಲಿ ಒಟ್ಟು 9 ವಿಕೆಟ್ಗಳನ್ನು ಉರುಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಾಯಕ ಮಿಚೆಲ್ ಸ್ಯಾಂಟ್ನರ್ ತನ್ನ ಸ್ಪಿನ್ ಬೌಲಿಂಗ್ ಮೂಲಕ 55 ರನ್ಗೆ 2 ವಿಕೆಟ್ಗಳನ್ನು ಕಬಳಿಸಿ ಹೆನ್ರಿಗೆ ಸಾಥ್ ನೀಡಿದರು.