ಸಿಎಸ್ಕೆ ಸಹಾಯಕ ಬೌಲಿಂಗ್ ಕೋಚ್ ಆಗಿ ಶ್ರೀಧರನ್ ಶ್ರೀರಾಮ್ ನೇಮಕ

ಶ್ರೀಧರನ್ ಶ್ರೀರಾಮ್ | PC : NDTV
ಚೆನ್ನೈ: ಮುಂಬರುವ 2025ರ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ತಂಡವು ಭಾರತದ ಮಾಜಿ ಆಲ್ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ತನ್ನ ಸಹಾಯಕ ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ.
ಸಿಎಸ್ಕೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಶ್ರೀರಾಮ್ ಅವರು ಸ್ಟೀಫನ್ ಫ್ಲೆಮಿಂಗ್(ಮುಖ್ಯ ಕೋಚ್), ಮೈಕ್ ಹಸ್ಸಿ(ಬ್ಯಾಟಿಂಗ್ ಕೋಚ್)ಹಾಗೂ ಎರಿಕ್ ಸಿಮೊನ್ಸ್(ಬೌಲಿಂಗ್ ಸಲಹೆಗಾರ)ಅವರನ್ನೊಳಗೊಂಡ ಕೋಚಿಂಗ್ ಬಳಗವನ್ನು ಸೇರಿಕೊಂಡಿದ್ದಾರೆ.
ಶ್ರೀರಾಮ್ ವಿವಿಧ ಹಂತಗಳಲ್ಲಿ ತರಬೇತುದಾರನಾಗಿ ಸಾಕಷ್ಟು ಅನುಭವ ಪಡೆದಿದ್ದಾರೆ. ಶ್ರೀರಾಮ್ ಅವರು ಡ್ವೇಯ್ನ್ ಬ್ರಾವೊ ಬದಲಿಗೆ ಸಿಎಸ್ಕೆ ತಂಡ ಸೇರುತ್ತಿದ್ದಾರೆ. ಬ್ರಾವೊ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಲಹೆಗಾರನಾಗಿ ಆಯ್ಕೆಯಾಗಿದ್ದಾರೆ.
ಶ್ರೀರಾಮ್ 2016ರಿಂದ 2022ರ ತನಕ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡವನ್ನು ಸೇರುವ ಸಲುವಾಗಿ ಸಹಾಯಕ ಕೋಚ್ ಹುದ್ದೆ ತ್ಯಜಿಸಿದ್ದರು. 2022ರ ಆಗಸ್ಟ್ನಲ್ಲಿ ಏಶ್ಯಕಪ್ ಹಾಗೂ ಟಿ20 ವಿಶ್ವಕಪ್ಗಿಂತ ಮೊದಲು ಬಾಂಗ್ಲಾದೇಶದ ಟಿ20 ಸಲಹೆಗಾರನಾಗಿ ನೇಮಕಗೊಂಡಿದ್ದರು. 2023ರಲ್ಲಿ ಲಕ್ನೊ ಸೂಪರ್ ಜಯಂಟ್ಸ್ಗೆ ಸಹಾಯಕ ಕೋಚ್ ಆಗಿ ಸೇರಿಕೊಂಡಿದ್ದರು. ಏಕದಿನ ವಿಶ್ವಕಪ್ಗಿಂತ ಮೊದಲು ತಾಂತ್ರಿಕ ಸಲಹೆಗಾರನಾಗಿ ಬಾಂಗ್ಲಾದೇಶ ತಂಡಕ್ಕೆ ವಾಪಸಾಗಿದ್ದರು.
ಶ್ರೀರಾಮ್ ಅವರು ಡೆಲ್ಲಿ ಡೆರ್ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್)ತಂಡದ ಸಹಾಯಕ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು.
2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡದಲ್ಲಿ ಆರ್. ಅಶ್ವಿನ್, ರವೀಂದ್ರ ಜಡೇಜ, ಶ್ರೇಯಸ್ ಗೋಪಾಲ್ ಹಾಗೂ ನೂರ್ ಅಹ್ಮದ್ ಪ್ರಮುಖ ಸ್ಪಿನ್ನರ್ಗಳಾಗಿದ್ದಾರೆ. ದೀಪಕ್ ಹೂಡಾ ಹಾಗೂ ರಚಿನ್ ರವೀಂದ್ರ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ.