10,000 ಟೆಸ್ಟ್ ರನ್ ಕ್ಲಬ್ಗೆ ಸ್ಟೀವ್ ಸ್ಮಿತ್ ಸೇರ್ಪಡೆ | ಈ ಮೈಲಿಗಲ್ಲು ತಲುಪಿದ ವಿಶ್ವದ 15ನೇ ಬ್ಯಾಟರ್

PC | ICC
ಗಾಲೆ : ಹಿರಿಯ ಬ್ಯಾಟರ್ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಮೈಲಿಗಲ್ಲು ತಲುಪಿದ ವಿಶ್ವದ 15ನೇ ಹಾಗೂ ಆಸ್ಟ್ರೇಲಿಯದ ನಾಲ್ಕನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಈ ಸಾಧನೆ ಮಾಡಿದರು.
ಸ್ಮಿತ್ ಅವರು ಅಲನ್ ಬಾರ್ಡರ್, ಸ್ಟೀವ್ ವಾ ಹಾಗೂ ರಿಕಿ ಪಾಂಟಿಂಗ್ ಅವರನ್ನೊಳಗೊಂಡ ಆಸ್ಟ್ರೇಲಿಯದ ಗಣ್ಯರ ಗುಂಪಿಗೆ ಸೇರಿದ್ದಾರೆ. ಸ್ಮಿತ್ ತನ್ನ 115ನೇ ಟೆಸ್ಟ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದು, ಬ್ರಿಯಾನ್ ಲಾರಾ ಮಾತ್ರ ಕೆಲವೇ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಸಕ್ರಿಯ ಆಟಗಾರರ ಪೈಕಿ ಸ್ಮಿತ್ ಅವರು ಜೋ ರೂಟ್(12,972 ರನ್)ನಂತರ ಗರಿಷ್ಠ ರನ್ ಗಳಿಸಿರುವ 2ನೇ ಆಟಗಾರನಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿರುದ್ಧ ಇತ್ತೀಚೆಗೆ ಕೊನೆಗೊಂಡಿರುವ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ 9,999 ರನ್ ಗಳಿಸಿದ್ದರು. 10,000 ರನ್ ಪೂರೈಸಲು ಕೇವಲ 1 ರನ್ ಅಗತ್ಯವಿತ್ತು. ಇದೀಗ 24 ದಿನಗಳ ನಂತರ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಸರಣಿಯ ವೇಳೆ ಕೊನೆಗೂ ಸ್ಮರಣೀಯ ಸಾಧನೆ ಮಾಡಿದರು.
ಪಂದ್ಯದಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲಿ ಸ್ಮಿತ್ ಒಂದು ರನ್ ಗಳಿಸಿ ಕ್ಷಿಪ್ರಗತಿಯಲ್ಲಿ ಮೈಲಿಗಲ್ಲು ತಲುಪಿದರು. ಬಲಗೈ ಬ್ಯಾಟರ್ ಸ್ಮಿತ್ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರ ಎಸೆತದಲ್ಲಿ 1 ರನ್ ಗಳಿಸಿ 10,000 ಟೆಸ್ಟ್ ರನ್ ಪೂರೈಸಿದರು. ಇದರಲ್ಲಿ 34 ಶತಕ ಹಾಗೂ 41 ಅರ್ಧಶತಕಗಳಿವೆ. ನೆರೆದಿದ್ದ ಪ್ರೇಕ್ಷಕರರಿಂದ ಕರತಾಡನ ಬಂದಾಗ ಸ್ಮಿತ್ ತನ್ನ ಬ್ಯಾಟ್ ಎತ್ತಿ, ಮಹತ್ವದ ಸಾಧನೆಯನ್ನು ಸಂಭ್ರಮಿಸಿದರು.
ಸ್ಮಿತ್ ಅವರು ವೇಗವಾಗಿ 10,000 ಟೆಸ್ಟ್ ರನ್ ಪೂರೈಸಿದ 5ನೇ ಕ್ರಿಕೆಟಿಗನಾಗಿದ್ದಾರೆ. ಈ ಸಾಧನೆ ಮಾಡಿರುವ ವಿಶ್ವದ 15ನೇ ಆಟಗಾರನಾಗಿದ್ದಾರೆ.
*ವೇಗವಾಗಿ 10,000 ಟೆಸ್ಟ್ ರನ್ ಪೂರೈಸಿದ ಆಟಗಾರರು(ಇನಿಂಗ್ಸ್ ಆಧಾರದಲ್ಲಿ)
195-ಬ್ರಿಯಾನ್ ಲಾರಾ(ವೆಸ್ಟ್ಇಂಡೀಸ್), ಇಂಗ್ಲೆಂಡ್ ವಿರುದ್ಧ, ಮ್ಯಾಂಚೆಸ್ಟರ್(2004)
195-ಸಚಿನ್ ತೆಂಡುಲ್ಕರ್(ಭಾರತ), ಪಾಕಿಸ್ತಾನದ ವಿರುದ್ಧ ಈಡನ್ಗಾರ್ಡನ್ಸ್(2005)
195-ಕುಮಾರ ಸಂಗಕ್ಕರ(ಶ್ರೀಲಂಕಾ),ಆಸ್ಟ್ರೇಲಿಯದ ವಿರುದ್ಧ ಎಂಸಿಜಿ(2012)
196-ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ವೆಸ್ಟ್ಇಂಡೀಸ್ ವಿರುದ್ಧ, ನಾರ್ತ್ ಸೌಂಡ್(2008)
205-ಸ್ಟೀವ್ ಸ್ಮಿತ್(ಆಸ್ಟ್ರೇಲಿಯ), ಶ್ರೀಲಂಕಾದ ವಿರುದ್ಧ, ಗಾಲೆ(2025)
206-ರಾಹುಲ್ ದ್ರಾವಿಡ್(ಭಾರತ), ದಕ್ಷಿಣ ಆಫ್ರಿಕಾ ವಿರುದ್ಧ, ಚೆನ್ನೈ(2008)
►10,000, ಅದಕ್ಕಿಂತ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರ ಪಟ್ಟಿ
ಸಚಿನ್ ತೆಂಡುಲ್ಕರ್(ಭಾರತ)-15,921 ರನ್
ರಿಕಿ ಪಾಂಟಿಂಗ್(ಆಸ್ಟ್ರೇಲಿಯ)-13,378 ರನ್
ಜಾಕಸ್ ಕಾಲಿಸ್(ದಕ್ಷಿಣ ಆಫ್ರಿಕಾ)-13,289 ರನ್
ರಾಹುಲ್ ದ್ರಾವಿಡ್(ಭಾರತ)-13,288 ರನ್
ಜೋ ರೂಟ್(ಇಂಗ್ಲೆಂಡ್)-12,972 ರನ್
ಅಲಸ್ಟೈರ್ ಕುಕ್(ಇಂಗ್ಲೆಂಡ್)-12,472 ರನ್
ಕುಮಾರ ಸಂಗಕ್ಕರ(ಶ್ರೀಲಂಕಾ)-12,400 ರನ್
ಬ್ರಿಯಾನ್ ಲಾರಾ(ವೆಸ್ಟ್ಇಂಡೀಸ್)-11,953 ರನ್
ಶಿವನಾರಾಯಣ್ ಚಂದರ್ಪಾಲ್(ವೆಸ್ಟ್ಇಂಡೀಸ್)-11,867 ರನ್
ಮಹೇಲ ಜಯವರ್ಧನೆ(ಶ್ರೀಲಂಕಾ)-11,814 ರನ್
ಅಲನ್ ಬಾರ್ಡರ್(ಆಸ್ಟ್ರೇಲಿಯ)-11,174 ರನ್
ಸ್ಟೀವ್ ವಾ(ಆಸ್ಟ್ರೇಲಿಯ)-10,927 ರನ್
ಸುನೀಲ್ ಗವಾಸ್ಕರ್(ಭಾರತ)-10,122 ರನ್
ಯೂನಿಸ್ ಖಾನ್(ಪಾಕಿಸ್ತಾನ)-10,099 ರನ್
ಸ್ಟೀವ್ ಸ್ಮಿತ್(ಆಸ್ಟ್ರೇಲಿಯ)-10,000 ರನ್.