ಪಾಂಟಿಂಗ್, ಬ್ರಾಡ್ಮನ್ ಅವರಿದ್ದ ವಿಶೇಷ ಗುಂಪಿಗೆ ಸ್ಟೀವ್ ಸ್ಮಿತ್ ಸೇರ್ಪಡೆ
ಸ್ಟೀವ್ ಸ್ಮಿತ್ | PTI
ಮೆಲ್ಬರ್ನ್: ಆಸ್ಟ್ರೇಲಿಯದ ಬ್ಯಾಟರ್ ಸ್ಟೀವ್ ಸ್ಮಿತ್ ಭಾರತ ತಂಡದ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ಗುರುವಾರ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ತನ್ನ 42ನೇ ಅರ್ಧಶತಕವನ್ನು ಸಿಡಿಸುವ ಮೂಲಕ ಕ್ರಿಕೆಟ್ ಲೆಜೆಂಡ್ಗಳಾದ ರಿಕಿ ಪಾಂಟಿಂಗ್, ಡಾನ್ ಬ್ರಾಡ್ಮನ್ ಹಾಗೂ ಗ್ರೆಗ್ ಚಾಪೆಲ್ ಅವರನ್ನು ಒಳಗೊಂಡಿರುವ ವಿಶೇಷ ಗುಂಪಿಗೆ ಸೇರಿದ್ದಾರೆ.
ಪಾಂಟಿಂಗ್, ಬ್ರಾಡ್ಮನ್ ಹಾಗೂ ಚಾಪೆಲ್ ಈ ಐತಿಹಾಸಿಕ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಎಂಸಿಜಿಯಲ್ಲಿ ತನ್ನ 12ನೇ ಟೆಸ್ಟ್ ಪಂದ್ಯವನ್ನಾಡಿದ ಸ್ಮಿತ್ ಅವರು 10ನೇ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿ ಈ ಮೈಲಿಗಲ್ಲು ತಲುಪಿದರು. ಚಾಪೆಲ್ 17 ಟೆಸ್ಟ್ ಪಂದ್ಯಗಳಲ್ಲಿ 13 ಬಾರಿ ಅರ್ಧಶತಕ ಗಳಿಸಿದ್ದಾರೆ. ಬ್ರಾಡ್ಮನ್(11 ಟೆಸ್ಟ್ನಲ್ಲಿ 12 ಅರ್ಧಶತಕ)ಹಾಗೂ ಪಾಂಟಿಂಗ್(15 ಟೆಸ್ಟ್ನಲ್ಲಿ 11 ಅರ್ಧಶತಕ)ಕೂಡ ಪಟ್ಟಿಯಲ್ಲಿದ್ದಾರೆ.
ಸ್ಮಿತ್ ಅವರು ಕೊನೆಯ ಸೆಶನ್ನಲ್ಲಿ 71 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. 5 ಬೌಂಡರಿ ಹಾಗೂ ಒಂದು ಸಿಕ್ಸರ್ಗಳ ಸಹಾಯದಿಂದ ಔಟಾಗದೆ 68 ರನ್ ಗಳಿಸಿದರು.