ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್
ಸ್ವದೇಶಿ ಸರಣಿಯಲ್ಲಿ ಗರಿಷ್ಠ ರನ್
ವಿರಾಟ್ ಕೊಹ್ಲಿ , ಯಶಸ್ವಿ ಜೈಸ್ವಾಲ್ | Photo: PTI
ರಾಂಚಿ: ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸ್ವದೇಶದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಕಲೆ ಹಾಕಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ 4ನೇ ದಿನವಾದ ಸೋಮವಾರ ಭಾರತದ 2ನೇ ಇನಿಂಗ್ಸ್ ನಲ್ಲಿ 37 ರನ್ ಗಳಿಸಿದ ಜೈಸ್ವಾಲ್ ಸರಣಿಯಲ್ಲಿ 2 ದ್ವಿಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 655 ರನ್ ಗಳಿಸಿದರು. ಈ ಮೂಲಕ ಕೊಹ್ಲಿ ಅವರ ದಾಖಲೆ(655 ರನ್)ಯನ್ನು ಸರಿಗಟ್ಟಿದ ಸಾಧನೆ ಮಾಡಿದರು.
ಭಾರತದ 2ನೇ ಇನಿಂಗ್ಸ್ ನಲ್ಲಿ 44 ಎಸೆತಗಳಲ್ಲಿ 37 ರನ್ ಗಳಿಸಿದ ಜೈಸ್ವಾಲ್ ಅವರು ಜೋ ರೂಟ್ ಬೌಲಿಂಗ್ ನಲ್ಲಿ ಆ್ಯಂಡರ್ಸನ್ ಪಡೆದ ಅಮೋಘ ಡೈವಿಂಗ್ ಕ್ಯಾಚ್ ಗೆ ವಿಕೆಟ್ ಒಪ್ಪಿಸಿದರು.
1978-79ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆರು ಪಂದ್ಯಗಳಲ್ಲಿ ಒಟ್ಟು 732 ರನ್ ಗಳಿಸಿದ್ದ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಹೈದರಾಬಾದ್ ಟೆಸ್ಟ್ ನಲ್ಲಿ ಆಕ್ರಮಣಕಾರಿ ಬ್ಯಾಟಂಗ್ ನಲ್ಲಿ 80 ರನ್ ಗಳಿಸುವ ಮೂಲಕ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಭರ್ಜರಿ ಆರಂಭ ಪಡೆದಿದ್ದರು. ವಿಶಾಖಪಟ್ಟಣ ಟೆಸ್ಟ್ ನಲ್ಲಿ 209 ರನ್ ಗಳಿಸಿದ್ದ ಜೈಸ್ವಾಲ್ ಭಾರತ ಜಯ ಸಾಧಿಸಿ ಸರಣಿ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರಾಜ್ಕೋಟ್ ನಲ್ಲಿ ನಡೆದಿದ್ದ 3ನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದ್ವಿಶತಕ(ಔಟಾಗದೆ 214 ರನ್)ಗಳಿಸಿದ ಜೈಸ್ವಾಲ್ ಅವರು ಭಾರತಕ್ಕೆ ಸರಣಿಯಲ್ಲಿ ಮುನ್ನಡೆ ಒದಗಿಸಿಕೊಟ್ಟಿದ್ದರು. ರಾಂಚಿ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಜೈಸ್ವಾಲ್ 73 ರನ್ ಗಳಿಸಿದ್ದರು.
2016ರಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು 8 ಇನಿಂಗ್ಸ್ ಗಳಲ್ಲಿ ಎರಡು ಶತಕ ಹಾಗೂ ಎರಡು ಅರ್ಧಶತಕಗಳ ಸಹಿತ ಒಟ್ಟು 655 ರನ್ ಗಳಿಸಿದ್ದರು. 235 ರನ್ ಶ್ರೇಷ್ಠ ಸ್ಕೋರಾಗಿತ್ತು.
ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರು
655-ಭಾರತದ ನೆಲದಲ್ಲಿ 2024ರಲ್ಲಿ ಯಶಸ್ವಿ ಜೈಸ್ವಾಲ್
655-ಭಾರತದ ನೆಲದಲ್ಲಿ 2016ರಲ್ಲಿ ವಿರಾಟ್ ಕೊಹ್ಲಿ
602-ಇಂಗ್ಲೆಂಡ್ ನಲ್ಲಿ 2002ರಲ್ಲಿ ರಾಹುಲ್ ದ್ರಾವಿಡ್
593-ಇಂಗ್ಲೆಂಡ್ ನಲ್ಲಿ 2018ರಲ್ಲಿ ವಿರಾಟ್ ಕೊಹ್ಲಿ
586-ಭಾರತದಲ್ಲಿ 1961-62ರಲ್ಲಿ ವಿಜಯ್ ಮಾಂಜ್ರೇಕರ್