'ಕ್ರೇಝಿ' ರಿವರ್ಸ್-ಸ್ವೀಪ್ ಸಿಕ್ಸರ್ ನೊಂದಿಗೆ ಜೋಸ್ ಬಟ್ಲರ್ ಬ್ಯಾಟಿಂಗ್ ನೆನಪಿಸಿದ ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್ (Twitter/@mufaddal_vohra)
ಹೊಸದಿಲ್ಲಿ: ವೆಸ್ಟ್ ಇಂಡೀಸ್ ವಿರುದ್ಧ ಶನಿವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅತ್ಯುತ್ತಮ ಪ್ರದರ್ಶನ ನೀಡಿದರು. 'ಕ್ರೇಝಿ' ರಿವರ್ಸ್-ಸ್ವೀಪ್ ಸಿಕ್ಸರ್ ನೊಂದಿಗೆ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಬ್ಯಾಟಿಂಗ್ ಶೈಲಿಯನ್ನು ಯಶಸ್ವಿ ಜೈಸ್ವಾಲ್ ನೆನಪಿಸಿದರು.
ವೆಸ್ಟ್ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟಿಗೆ 178 ರನ್ ಗಳಿಸಿತ್ತು. ಗೆಲ್ಲಲು 179 ರನ್ ಗುರಿ ಪಡೆದ ಭಾರತ ತಂಡ ಆರಂಭಿಕರಾದ ಯಶಸ್ವಿ ಮತ್ತು ಶುಭಮನ್ ಗಿಲ್ ಆರಂಭಿಕ ವಿಕೆಟಿಗೆ165 ರನ್ ಗಳಿಸಿ 9 ವಿಕೆಟ್ ಗಳ ಸುಲಭ ಗೆಲುವು ತಂದುಕೊಟ್ಟರು.
ಫ್ಲೋರಿಡಾದ ಲಾಡರ್ಹಿಲ್ ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಗೆಲ್ಲಲೇಬೇಕಾದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವು ಭಾರತವನ್ನುಸುಸ್ಥಿತಿಯಲ್ಲಿರಿಸಿತು.
51 ಎಸೆತಗಳಲ್ಲಿ ಔಟಾಗದೆ 84 ರನ್ ಸಿಡಿಸಿದ್ದ ಯಶಸ್ವಿ ಅವರ ಅದ್ಭುತ ಇನ್ನಿಂಗ್ಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ತಮ್ಮ ಇನಿಂಗ್ಸ್ ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಹೊಡೆದರು.
ಅಕೀಲ್ ಹುಸೇನ್ ಬೌಲಿಂಗ್ ನಲ್ಲಿ ಜೈಸ್ವಾಲ್ ಅವರ ದಿಟ್ಟವಾದ ರಿವರ್ಸ್-ಸ್ವೀಪ್ ಎಲ್ಲರ ಗಮನವನ್ನು ಸೆಳೆಯಿತು.
12ನೇ ಓವರ್ ನಲ್ಲಿ ಯಶಸ್ವಿ ಸ್ವೀಪರ್ ಕವರ್ ನ ಮೇಲೆ ಒಂದು ಅಮೋಘ ಹೊಡೆತವನ್ನು ಬಾರಿಸಿದರು, ಚೆಂಡನ್ನು ಗರಿಷ್ಠ 69 ಮೀಟರ್ ದೂರ ಕಳುಹಿಸಿದರು.
ಕೌಶಲ ಹಾಗೂ ನಾವೀನ್ಯತೆಯ ಈ ಅದ್ಭುತ ಪ್ರದರ್ಶನವು ಇಂಗ್ಲೆಂಡ್ ನ ಬ್ಯಾಟಿಂಗ್ ಐಕಾನ್ ಜೋಸ್ ಬಟ್ಲರ್ ಅವರನ್ನು ನೆನಪಿಸಿತು.
ಕುತೂಹಲಕಾರಿ ವಿಷಯವೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (ಐಪಿಎಲ್ ) ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬಟ್ಲರ್ ಜೊತೆಗೆ ಯಶಸ್ವಿ ಜೈಸ್ವಾಲ್ ಆಡಿದ್ದಾರೆ.