ಸುಲ್ತಾನ್ ಜೊಹೊರ್ ಕಪ್ ಹಾಕಿ ಪಂದ್ಯಾವಳಿ; ಮಲೇಶ್ಯವನ್ನು 3-1 ಗೋಲುಗಳಿಂದ ಸೋಲಿಸಿದ ಭಾರತ
Photo: hockeyindia.org
ಜೊಹೊರ್ ಬಹ್ರು: ಮಲೇಶ್ಯದ ಜೊಹೊರ್ ಬಹ್ರು ನಗರದಲ್ಲಿ ನಡೆಯುತ್ತಿರುವ ಸುಲ್ತಾನ್ ಜೊಹೊರ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಭಾರತವು ಆತಿಥೇಯ ಮಲೇಶ್ಯವನ್ನು 3-1 ಗೋಲುಗಳಿಂದ ಸೋಲಿಸಿತು.
ಭಾರತದ ಪರವಾಗಿ ಆದಿತ್ಯ ಲಾಲಗೆ, ಅಮನ್ದೀಪ್ ಲಾಕ್ರ ಮತ್ತು ರೋಹಿತ್ ಗೋಲುಗಳನ್ನು ಬಾರಿಸಿದರು.
ಉತ್ತಮ್ ಸಿಂಗ್ ನೇತೃತ್ವದ ಭಾರತೀಯ ಜೂನಿಯರ್ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಡ್ರಾ ಸಾಧಿಸಿತ್ತು.
ಶನಿವಾರವೂ ತಂಡವು ಉತ್ತಮ ಪ್ರದರ್ಶನವನ್ನು ನೀಡಿತು. ಅದರ ಆರಂಭವು ಉತ್ತಮವಾಗಿತ್ತು. ಆದರೆ ಮೊದಲ ಗೋಲನ್ನು ಬಾರಿಸಿದ್ದು ಮಲೇಶ್ಯ. ಸುಹೈಮಿ ಇರ್ಫಾನ್ ಶಾಹ್ಮೀ 13ನೇ ನಿಮಿಷದಲ್ಲಿ ಗೋಲು ಬಾರಿಸಿ ತನ್ನ ತಂಡಕ್ಕೆ ಮುನ್ನಡೆ ನೀಡಿದರು.
ಎರಡನೇ ಕ್ವಾರ್ಟರ್ನ ಮೊದಲ ಕೆಲವು ನಿಮಿಷಗಳಲ್ಲಿ ಭಾರತಕ್ಕೆ ಹಲವು ಅವಕಾಶಗಳು ಲಭಿಸಿದವು. ಅಂಗದ್ಗೆ ಬೆನ್ನು ಬೆನ್ನಿಗೆ ಎರಡು ಪೆನಾಲ್ಟಿ ಕಾರ್ನರ್ಗಳು ಲಭಿಸಿದವು. ಆದರೆ, ಅವುಗಳನ್ನು ಗೋಲುಗಳನ್ನಾಗಿ ಪರಿವರ್ತಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಅದು 28ನೆ ನಿಮಿಷದಲ್ಲಿ ಲಾಲಗೆ ಗಳಿಸಿದ ಗೋಲಿನ ನೆರವಿನಿಂದ ಅಂಕಪಟ್ಟಿಯನ್ನು 1-1ರಲ್ಲಿ ಸಮಬಲಗೊಳಿಸಿತು. ಬಳಿಕ 37ನೇ ನಿಮಿಷದಲ್ಲಿ ಅಮನ್ದೀಪ್ ಮತ್ತು 54ನೇ ನಿಮಿಷದಲ್ಲಿ ರೋಹಿತ್ ಗೋಲುಗಳನ್ನು ಬಾರಿಸಿ ಭಾರತಕ್ಕೆ 3-1 ಮುನ್ನಡೆ ಒದಗಿಸಿದರು.
ಇನ್ನು ಭಾರತವು ಸೋಮವಾರ ನ್ಯೂಝಿಲ್ಯಾಂಡನ್ನು ಎದುರಿಸಲಿದೆ.