ಜ. 23ರಂದು ನೋಡುತ್ತೇನೆ: ಭಾರತೀಯ ಆಟಗಾರರಿಗೆ ಗಡುವು ನೀಡಿದ ಸುನೀಲ್ ಗಾವಸ್ಕರ್
ಸುನೀಲ್ ಗಾವಸ್ಕರ್ | PC ; @ICC
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತ ತಂಡದ ಆಟಗಾರರು ತೋರಿದ ನಿರಾಶಾದಾಯಕ ಪ್ರದರ್ಶನ, ನಿರ್ದಿಷ್ಟವಾಗಿ ಬ್ಯಾಟರ್ ಗಳು ತೋರಿದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರು ಹಾಗೂ ಪರಿಣತರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಆಟಗಾರರ ಹಿರಿಮೆ ಮತ್ತು ಖ್ಯಾತಿ ಏನೇ ಇದ್ದರೂ, ತಮ್ಮ ಫಾರ್ಮ್ ಅನ್ನು ಮರಳಿ ಪಡೆಯಲು ಇವರೆಲ್ಲ ದೇಶೀಯ ಕ್ರಿಕೆಟ್ ಗೆ ಮರಳಬೇಕು ಎಂದು ಅವರೆಲ್ಲ ಸಲಹೆ ನೀಡಿದ್ದರು.
ಈ ನಡುವೆ, ಭಾರತೀಯ ಆಟಗಾರರಿಗೆ ಗಡುವು ನೀಡಿರುವ ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗಾವಸ್ಕರ್, “ಜನವರಿ 23ರಂದು ಮತ್ತೊಂದು ಸುತ್ತಿನ ರಣಜಿ ಪಂದ್ಯಗಳು ಪ್ರಾರಂಭಗೊಳ್ಳಲಿದ್ದು, ಎಷ್ಟು ಮಂದಿ ಭಾರತ ತಂಡದ ಆಟಗಾರರು ಈ ಸುತ್ತಿಗೆ ಲಭ್ಯರಿದ್ದಾರೆ ಎಂಬುದನ್ನು ನಾನು ನೋಡುತ್ತೇನೆ” ಎಂದು ಎಚ್ಚರಿಕೆ ರೂಪದ ಸವಾಲು ಹಾಕಿದ್ದಾರೆ.
“ಇದು ಯಾರೆಲ್ಲ ಗಂಭೀರವಾಗಿದ್ದೀರಿ ಎಂಬುದನ್ನು ಹೇಳಲಿದೆ. ಆಟವಾಡಲು ಯಾವುದೇ ಕಾರಣಗಳನ್ನು ನೀಡಬಾರದು. ಒಂದು ವೇಳೆ ನೀವೇನಾದರೂ ರಣಜಿ ಪಂದ್ಯಗಳಲ್ಲಿ ಆಟವಾಡದಿದ್ದರೆ, ಮುಖ್ಯ ಕೋಚ್ ಗೌತಮ್ ಗಂಭೀರ್ ನಿಮಗೆ ಯಾವುದೇ ಬದ್ಧತೆಯಿಲ್ಲ. ನಮಗೆ ಬದ್ಧತೆಯ ಅಗತ್ಯವಿದೆ. ನೀವು ಆಡುವುದಿಲ್ಲ ಅಲ್ಲವೆ? ನಿಮಗೇನು ಬೇಕೋ ಅದನ್ನು ಮಾಡಿ. ಆದರೆ, ನೀವು ಭಾರತೀಯ ಟೆಸ್ಟ್ ತಂಡಕ್ಕೆ ಮರಳುವುದಿಲ್ಲ ಎಂದು ನಿಮಗೆ ಹೇಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಭಾರತ ತಂಡದ ಪ್ರಮುಖ ಬ್ಯಾಟರ್ ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್.ರಾಹುಲ್, ರಿಷಭ್ ಪಂತ್ ಇತ್ಯಾದಿ ಬ್ಯಾಟರ್ ಗಳು ಆಸ್ಟ್ರೇಲಿಯ ಪ್ರವಾಸದಲ್ಲಿ ದಯನೀಯವಾಗಿ ವಿಫಲಗೊಂಡಿದ್ದರು. ಶುಭಮನ್ ಗಿಲ್ ಐದು ಇನಿಂಗ್ಸ್ ಗಳಲ್ಲಿ ಕೇವಲ 93 ರನ್ ಗಳಿಸಿದರೆ, ರಿಷಭ್ ಪಂತ್ 9 ಇನಿಂಗ್ಸ್ ಗಳಲ್ಲಿ ಕೇವಲ 255 ರನ್ ಗಳಿಸಿದ್ದರು.
ಭಾರತದ ಪರ ಯಶಸ್ವಿಯ ಬ್ಯಾಟರ್ ಆಗಿ ಹೊರ ಹೊಮ್ಮಿದ್ದ ಯಶಸ್ವಿ ಜೈಸ್ವಾಲ್, 10 ಇನಿಂಗ್ಸ್ ಗಳಲ್ಲಿ 391 ರನ್ ಗಳಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ 10 ಇನಿಂಗ್ಸ್ ಗಳಿಂದ 276 ರನ್ ಗಳಿಸಿದ್ದರು. ಭಾರತ ತಂಡದ ಈ ಪ್ರಮುಖ ಬ್ಯಾಟರ್ ಗಳ ವೈಫಲ್ಯದ ಕುರಿತು ವ್ಯಾಪಕ ಟೀಕೆ ಮತ್ತು ಕಳವಳ ವ್ಯಕ್ತವಾಗಿತ್ತು.