ಅನಾರೋಗ್ಯಪೀಡಿತ ವಿನೋದ್ ಕಾಂಬ್ಳಿಗೆ ಸುನೀಲ್ ಗವಾಸ್ಕರ್ ಪ್ರತಿಷ್ಠಾನದ ನೆರವು

ಸುನೀಲ್ ಗವಾಸ್ಕರ್ , ವಿನೋದ್ ಕಾಂಬ್ಳಿ | PTI
ಮುಂಬೈ: ಗಂಭೀರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ಭಾರತದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿಗೆ ಕ್ರಿಕೆಟ್ ಲೆಜೆಂಡ್ ಸುನೀಲ್ ಗವಾಸ್ಕರ್ ತಮ್ಮ ಪ್ರತಿಷ್ಠಾನದ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಅಗತ್ಯವಿರುವ ಮಾಜಿ ಅಂತರ್ರಾಷ್ಟ್ರೀಯ ಕ್ರೀಡಾಪಟುಗಳಿಗೆ ಸಹಾಯ ಮಾಡಲು 1999ರಲ್ಲಿ ಪ್ರಾರಂಭವಾದ ಗವಾಸ್ಕರ್ ಅವರ ಚಾಂಪ್ಸ್ ಫೌಂಡೇಶನ್, 53ರ ವಯಸ್ಸಿನ ಕಾಂಬ್ಳಿಗೆ ಎಪ್ರಿಲ್ 1ರಿಂದ ಅವರ ಜೀವನಪೂರ್ತಿ ತಿಂಗಳಿಗೆ 30,000 ರೂ. ನೆರವು ನೀಡುತ್ತಿದೆ. ಹೆಚ್ಚುವರಿಯಾಗಿ ಅವರ ವೈದ್ಯಕೀಯ ವೆಚ್ಚಗಳಿಗಾಗಿ ವರ್ಷಕ್ಕೆ 30,000 ರೂ.ಗಳನ್ನು ನೀಡಲಿದೆ.
ಜನವರಿ 11ರಂದು ವಾಂಖೆಡೆ ಕ್ರೀಡಾಂಗಣದ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗವಾಸ್ಕರ್ ಅವರು ಕಾಂಬ್ಳಿ ಅವರನ್ನು ಭೇಟಿಯಾಗಿದ್ದರು. ಆಗ ಭಾವುಕರಾದ ಕಾಂಬ್ಳಿ ಅವರು ಗವಾಸ್ಕರ್ ಅವರ ಪಾದ ಸ್ಪರ್ಶಿಸಿದ್ದರು. ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಕಾಂಬ್ಳಿ ಕಳೆದ ವರ್ಷ ಡಿಸೆಂಬರ್ 21ರಂದು ಮೂತ್ರದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಎರಡು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದರು. ಕಾಂಬ್ಳಿ ಅವರ ಕಟ್ಟಾ ಅಭಿಮಾನಿ ಡಾ.ಶೈಲೇಶ್ ಠಾಕೂರ್ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಒದಗಿಸಿದ್ದರು.