“ಸ್ಟುಪಿಡ್! ಸ್ಟುಪಿಡ್! ಸ್ಟುಪಿಡ್!": ವಿಕೆಟ್ ಕೈಚೆಲ್ಲಿದ ರಿಷಭ್ ಪಂತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುನಿಲ್ ಗವಾಸ್ಕರ್

ರಿಷಭ್ ಪಂತ್ (Photo: PTI)
ಮೆಲ್ಬೋರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡದ ನಡುವೆ ನಡೆಯುತ್ತಿರುವ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಭಾರತ ತಂಡವು ಫಾಲೋ ಆನ್ ಭೀತಿ ಎದುರಿಸುತ್ತಿದ್ದರೂ, ಕೆಟ್ಟ ಹೊಡೆತಕ್ಕೆ ಬಲಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿರುದ್ಧ ಕೆಂಡ ಕಾರಿದ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸುನೀಲ್ ಗಾವಸ್ಕರ್, “ಮೂರ್ಖ ಹೊಡೆತ “ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಮೊತ್ತವು 191 ರನ್ ಆಗಿದ್ದಾಗ, ಸ್ಕಾಟ್ ಬೋಲಂಡ್ ಬಾಲ್ ಅನ್ನು ವಿಕೆಟ್ ಕೀಪರ್ ಹಿಂದಕ್ಕೆ ಬಾರಿಸುವ ಪ್ರಯತ್ನದಲ್ಲಿ ಡೀಪ್ ಥರ್ಡ್ ಮನ್ ನಲ್ಲಿದ್ದ ನಥಾನ್ ಲಯಾನ್ ಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಆಗ ಭಾರತ ತಂಡಕ್ಕೆ ಫಾಲೊ ಆನ್ ತಪ್ಪಿಸಿಕೊಳ್ಳಲು ಇನ್ನೂ 84 ರನ್ ಗಳ ಅಗತ್ಯವಿತ್ತು.
ರಿಷಬ್ ಪಂತ್ ಕೆಟ್ಟ ಹೊಡೆತಕ್ಕೆ ಔಟಾಗುತ್ತಿದ್ದಂತೆಯೆ ತಮ್ಮ ತಾಳ್ಮೆ ಕಳೆದುಕೊಂಡ ವೀಕ್ಷಕ ವಿವರಣೆ ಗ್ಯಾಲರಿಯಲ್ಲಿದ್ದ ಸುನೀಲ್ ಗಾವಸ್ಕರ್, “ಸ್ಟುಪಿಡ್! ಸ್ಟುಪಿಡ್! ಸ್ಟುಪಿಡ್! ಅಲ್ಲಿ ಫೀಲ್ಡರ್ ಇದ್ದರೂ, ನೀನು ಅಂತಹ ಹೊಡೆತಕ್ಕೆ ಮುಂದಾಗಿದ್ದೀಯ. ಈ ಹಿಂದಿನ ಬಾಲ್ ಅನ್ನು ಅದೇ ರೀತಿ ಹೊಡೆಯುವ ಪ್ರಯತ್ನದಲ್ಲಿ ನೀನು ವಿಫಲನಾಗಿದ್ದೆ ಹಾಗೂ ನೀನೀಗ ಎಲ್ಲಿ ಔಟಾಗಿದ್ದೀಯ ಎಂಬುದನ್ನು ನೋಡು. ನೀನು ಡೀಪ್ ಥರ್ಡ್ ಮನ್ ನಲ್ಲಿ ಕ್ಯಾಚ್ ನೀಡಿದ್ದೀಯ. ಅದರರ್ಥ ನಿನ್ನ ವಿಕೆಟ್ ಅನ್ನು ಬಿಸಾಡಿದ್ದೀಯ ಎಂದು. ಅದರಲ್ಲೂ ಭಾರತ ಇದ್ದಂತಹ ಪರಿಸ್ಥಿತಿಯಲ್ಲಿ ಹಾಗೆ ಮಾಡಬಾರದಿತ್ತು. ನೀನು ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅದು ನಿನ್ನ ಸಹಜ ಆಟ ಎಂದು ಹೇಳಲು ಬರುವುದಿಲ್ಲ. ಅದು ನಿನ್ನ ಸಹಜ ಆಟವಲ್ಲ ಎಂದು ಹೇಳಲು ನನಗೆ ವಿಷಾದವಾಗುತ್ತಿದೆ. ಅದೊಂದು ಮೂರ್ಖ ಹೊಡೆತ. ಅದರಿಂದ ನಿನ್ನ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಆತ ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಹೋಗಕೂಡದು, ಬದಲಿಗೆ ಮತ್ತೊಂದು ಡ್ರೆಸ್ಸಿಂಗ್ ರೂಂಗೆ ಹೋಗಬೇಕು” ಎಂದು ಖಾರವಾಗಿ ಟೀಕಿಸಿದರು.
ರವೀಂದ್ರ ಜಡೇಜಾರೊಂದಿಗೆ ಆರನೆಯ ವಿಕೆಟ್ ಜೊತೆಯಾಟದಲ್ಲಿ ರಿಷಭ್ ಪಂತ್ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಅವರು ಕೆಲವು ಬೌಂಡರಿಗಳನ್ನು ಹೊಡೆದರೂ, ಲಾಂಗ್ ಲೆಗ್ ಗೆ ಅವಸರವಾಗಿ ಬಾಲ್ ಅನ್ನು ಪುಲ್ ಮಾಡಿದ್ದರಿಂದ, ಡೀಪ್ ಥರ್ಡ್ ಮನ್ ನಲ್ಲಿದ್ದ ನಥಾನ್ ಲಯಾನ್ ಗೆ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಿಗೇ ರವೀಂದ್ರ ಜಡೇಜಾ ಕೂಡಾ ನಥಾನ್ ಲಯಾನ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಔಟಾಗಿದ್ದರಿಂದ ಭಾರತ ತಂಡ ಮತ್ತಷ್ಟು ಒತ್ತಡಕ್ಕೆ ಸಿಲುಕಿತು. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ ಕೇವಲ 221 ರನ್ ಆಗಿತ್ತು.