ಆಸ್ಟ್ರೇಲಿಯ ವಿರುದ್ಧ ಟಿ-20 ಸರಣಿಗೆ ಸೂರ್ಯಕುಮಾರ್ ನಾಯಕತ್ವ
Photo: twitter \ @surya_14kumar
ಹೊಸದಿಲ್ಲಿ, ನ.17: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನೂ ಪಾದದ ನೋವಿನಿಂದ ಚೇತರಿಸಿಕೊಳ್ಳದ ಕಾರಣ ಸೂರ್ಯಕುಮಾರ್ ಯಾದವ್ ಮುಂಬರುವ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಐದು ಪಂದ್ಯಗಳ ಸರಣಿಯು ನವೆಂಬರ್ 23ರಂದು ವಿಝಾಗ್ನಲ್ಲಿ ಆರಂಭವಾಗಲಿದ್ದು, ಡಿಸೆಂಬರ್ 3ರಂದು ಹೈದರಾಬಾದ್ನಲ್ಲಿ ಕೊನೆಯಾಗಲಿದೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಂಡ್ಯ ಪಾದ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ ಎರಡು ತಿಂಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸೂರ್ಯಕುಮಾರ್ರನ್ನು ನಾಯಕನ ಸ್ಥಾನಕ್ಕೆ ನೇಮಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ-20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಿಂದಲೂ ವಂಚಿತರಾಗುವ ಸಾಧ್ಯತೆ ಇದೆ.
ಭಾರತ ತಂಡವು ವೆಸ್ಟ್ಇಂಡೀಸ್ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದಾಗ ಸೂರ್ಯಕುಮಾರ್ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಕೆರಿಬಿಯನ್ ಹಾಗೂ ಅಮೆರಿಕದಲ್ಲಿ 5 ಪಂದ್ಯಗಳ ಟಿ-20 ಸರಣಿಯು ನಡೆದಿತ್ತು.
ಕೆಲವು ವರ್ಷಗಳ ಹಿಂದೆ ಎಮರ್ಜಿಂಗ್ ಕಪ್ನಲ್ಲಿ ಮುಂಬೈ ತಂಡ ಹಾಗೂ ಭಾರತದ ಅಂಡರ್-23 ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಆಸ್ಟ್ರೇಲಿಯ-ಭಾರತ ಟಿ-20 ಪಂದ್ಯಕ್ಕೆ ಛತ್ತೀಸ್ಗಡ ಆತಿಥ್ಯ
ದ್ವಿಪಕ್ಷೀಯ ಸರಣಿಯ ಭಾಗವಾಗಿ ನವೆಂಬರ್ 23ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಐದು ಪಂದ್ಯಗಳ ಟಿ-20 ಅಂತರ್ರಾಷ್ಟ್ರೀಯ ಸರಣಿಯ ಒಂದು ಪಂದ್ಯಕ್ಕೆ ಛತ್ತೀಸ್ಗಡ ಆತಿಥ್ಯವಹಿಸಲಿದೆ.
ಟಿ-20 ಪಂದ್ಯವು ಡಿಸೆಂಬರ್ 1,2023ರಂದು ರಾಯ್ಪುರದ ಅಟಲ್ ನಗರದ ಶಹೀದ್ ವೀರ್ ನಾರಾಯಣ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ನಾಗ್ಪುರದಲ್ಲಿ ನಿಗದಿಯಾಗಿದ್ದ ನಾಲ್ಕನೇ ಟ್ವೆಂಟಿ-20 ಪಂದ್ಯವನ್ನು ಕೆಲವು ತಾಂತ್ರಿಕ ಕಾರಣಗಳಿಗಾಗಿ ರಾಯ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಛತ್ತೀಸ್ಗಡ ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ರಾಜೇಶ್ ದೇವ್ ಶುಕ್ರವಾರ ಹೇಳಿದ್ದಾರೆ. ಪಂದ್ಯವನ್ನು ರಾತ್ರಿ 7ರಿಂದ ಹೊನಲುಬೆಳಕಿನಡಿ ಆಡಲಾಗುತ್ತದೆ ಐದನೇ ಹಾಗೂ ಅಂತಿಮ ಟಿ-20 ಪಂದ್ಯವನ್ನು ಆಡಲು ಭಾರತವು ರಾಯ್ಪುರದಿಂದ ಬೆಂಗಳೂರಿಗೆ ಪ್ರಯಾಣಿಸಲಿದೆ ಎಂದು ದೇವ್ ಹೇಳಿದ್ದಾರೆ. ‘‘ಛತ್ತೀಸ್ಗಡ ರಾಜ್ಯ ಕ್ರಿಕೆಟ್ ಸಂಸ್ಥೆ ಟಿ-20 ಪಂದ್ಯಕ್ಕಾಗಿ ತನ್ನ ತಯಾರಿಯನ್ನು ಆರಂಭಿಸಿದೆ.
ನಾವು ಈ ವರ್ಷದ ಜನವರಿ 21ರಂದು ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು. ಇದೇ ಮೊದಲ ಬಾರಿ ಟಿ-20 ಪಂದ್ಯವನ್ನು ಆಯೋಜಿಸುತ್ತಿದ್ದೇವೆ’’ ಎಂದು ದೇವ್ ಹೇಳಿದ್ದಾರೆ.