ಕ್ರೀಡಾ ಸಚಿವರನ್ನು ಕ್ಲೀನ್ಬೌಲ್ಡ್ ಮಾಡಿದ ಎಳೆಯ ಕ್ರಿಕೆಟ್ ಪ್ರತಿಭೆ ಸುಶೀಲಾ ಮೀನಾ
ಸುಶೀಲಾ ಮೀನಾ | PC : X
ಹೊಸದಿಲ್ಲಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ರಿಂದ ಪ್ರಶಂಸೆಗೆ ಒಳಗಾಗಿರುವ 12 ವರ್ಷದ ಬಾಲಕಿ ಸುಶೀಲಾ ಮೀನಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅವರು ಒಲಿಂಪಿಕ್ಸ್ ಪದಕ ವಿಜೇತ ಹಾಗೂ ರಾಜಸ್ಥಾನದ ಕ್ರೀಡಾ ಸಚಿವ ರಾಜ್ಯವರ್ಧನ ರಾಥೋಡ್ರನ್ನು ಕ್ರಿಕೆಟ್ ಆಟದಲ್ಲಿ ಕ್ಲೀನ್ಬೌಲ್ಡ್ ಮಾಡಿದ್ದಾರೆ.
ಅತ್ಯುತ್ತಮ ಬೌಲಿಂಗ್ ಪರಿಣತಿಯನ್ನು ಹೊಂದಿದ್ದಾರೆ ಎನ್ನಲಾದ ಮೀನಾ ಶ್ರೇಷ್ಠ ಎಸೆತವೊಂದರಲ್ಲಿ ರಾಥೋಡ್ರನ್ನು ಕ್ಲೀನ್ಬೌಲ್ಡ್ ಮಾಡಿದ್ದಾರೆ. ಆ ಮೂಲಕ ತನ್ನ ಅಗಾಧ ಕ್ರಿಕೆಟ್ ಪ್ರತಿಭೆ ಮತ್ತು ಸಮಚಿತ್ತತೆಯನ್ನು ಪ್ರದರ್ಶಿಸಿದ್ದಾರೆ.
ಹದಿನೈದು ದಿನಗಳ ಹಿಂದಿನವರೆಗೂ ಸುಶೀಲಾ ಸಾಮಾನ್ಯ ಜೀವನವನ್ನು ನಡೆಸುತ್ತಾ ಬಂದಿದ್ದಾರೆ. ಆದರೆ, ‘ಮಾಸ್ಟರ್ ಬ್ಲಾಸ್ಟರ್’ರ ಸಾಮಾಜಿಕ ಮಾಧ್ಯಮ ಸಂದೇಶವೊಂದು ಅವರ ಬದುಕನ್ನು ಬದಲಾಯಿಸಿತು. ಸಚಿನ್ ತನ್ನ ಸಂದೇಶದಲ್ಲಿ ಮೀನಾ ಬೌಲಿಂಗ್ ಹಾಕುವ ವೀಡಿಯೊವೊಂದನ್ನು ಹಾಕಿದ್ದರು. ಅವರ ಬೌಲಿಂಗ್ ಶೈಲಿಯು ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಝಹೀರ್ ಖಾನ್ರ ಶೈಲಿಯನ್ನು ಹೋಲುತ್ತದೆ. ಸಚಿನ್ರ ಪೋಸ್ಟ್ ಬಳಿಕ ಮೀನಾ ರಾತೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಮಿಂಚಿದರು.
ಎಳೆಯ ಎಡಗೈ ವೇಗಿ ಸುಶೀಲಾರ ಬೌಲಿಂಗ್ ಎದುರಿಸಿ ತಾನು ಮಾಡಿದ ಬ್ಯಾಟಿಂಗ್ನ ವೀಡಿಯೊವನ್ನು ರಾಥೋಡ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ್ದಾರೆ. ‘‘ಚಿಕ್ಕ ಮಗಳಿಂದ ಕ್ಲೀನ್ ಬೌಲ್ಡ್ ಆಗಿ ನಾವೆಲ್ಲಾ ಗೆದ್ದೆವು’’ ಎಂದು ಅವರು ಬರೆದಿದ್ದಾರೆ.
ರಾಜಸ್ಥಾನದ ಪ್ರತಾಪ್ಗಢ ಜಿಲ್ಲೆಯ ಸಣ್ಣ ಹಳ್ಳಿಯೊಂದರ ನಿವಾಸಿಯಾಗಿರುವ ಸುಶೀಲಾ ತನ್ನ ಕ್ರಿಕೆಟ್ ಪ್ರತಿಭೆಯನ್ನು ಪತ್ತೆಹಚ್ಚಿದ್ದು ಮೂರು ವರ್ಷಗಳ ಹಿಂದೆಯಷ್ಟೆ. ತರಬೇತಿ ಮತ್ತು ಸೌಲಭ್ಯಗಳ ಕೊರತೆಯಿದ್ದರೂ, ಸುಶೀಲಾ ಕ್ರಿಕೆಟನ್ನು ಶ್ರದ್ಧೆಯಿಂದ ಆಡುತ್ತಿದ್ದಾರೆ.
‘‘ನಾನು ಮೂರು ವರ್ಷಗಳಿಂದ ಆಡುತ್ತಿದ್ದೇನೆ. ನನ್ನ ಕೋಚ್ ಈಶ್ವರ್ಲಾಲ್ ಮೀನಾ ಬೌಲಿಂಗ್ ಹೇಗೆ ಮಾಡಬೇಕು ಎನ್ನುವುದನ್ನು ಕಲಿಸಿಕೊಡುತ್ತಿದ್ದಾರೆ.’’ ಎಂದು ಎಎನ್ಐಯೊಂದಿಗೆ ಮಾತನಾಡಿದ ಸುಶೀಲಾ ಹೇಳಿದ್ದಾರೆ.