ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್ ಗೆ ಶಾಕ್, ಜೆಸ್ಸಿಕಾ ಸೆಮಿ ಫೈನಲ್ ಗೆ
ಜೆಸ್ಸಿಕಾ ಪೆಗುಲಾ | PC: NDTV
ನ್ಯೂಯಾರ್ಕ್: ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಗೆ ಸೋಲುಣಿಸಿದ ಜೆಸ್ಸಿಕಾ ಪೆಗುಲಾ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ಜೆಸ್ಸಿಕಾ ಪೋಲ್ಯಾಂಡ್ ನ ಆಟಗಾರ್ತಿ ಸ್ವಿಯಾಟೆಕ್ ರನ್ನು 6-2, 6-4 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದರು.
ಪ್ರತಿಷ್ಠಿತ ಅರ್ಥರ್ ಅಶೆ ಕ್ರೀಡಾಂಗಣದಲ್ಲಿ ಆಡಿದ ಪೆಗುಲಾ ತನ್ನ ಪರಾಕ್ರಮ ಹಾಗೂ ಬದ್ದತೆಯನ್ನು ಪ್ರದರ್ಶಿಸಿದರು. ತನ್ನ ವೃತ್ತಿಜೀವನದಲ್ಲಿ ಅತಿದೊಡ್ಡ ಗೆಲುವು ಪಡೆದರು. ಏಳನೇ ಬಾರಿ ಕ್ವಾರ್ಟರ್ ಫೈನಲ್ ನಲ್ಲಿ ಕಾಣಿಸಿಕೊಂಡ ಜೆಸ್ಸಿಕಾ ಕೊನೆಗೂ ಸೆಮಿ ಫೈನಲ್ ಗೆ ಪ್ರವೇಶಿಸಿದರು. ಈ ಹಿಂದಿನ 6 ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜೆಸ್ಸಿಕಾ ಸೋತಿದ್ದರು.
ಈ ಸೋಲಿನೊಂದಿಗೆ 7ನೇ ಬಾರಿ ಗ್ರ್ಯಾನ್ಸ್ಲಾಮ್ ಸೆಮಿ ಫೈನಲ್ ತಲುಪುವ ಸ್ವಿಯಾಟೆಕ್ ಅವರ ಯೋಜನೆ ತಲೆಕೆಳಗಾಗಿದೆ.
ನಾನು ಹಲವಾರು ಬಾರಿ ಕ್ವಾರ್ಟರ್ ಫೈನಲ್ ಗೆ ತಲುಪಿದ್ದೆ. ಆದರೆ ಪ್ರತಿ ಬಾರಿಯೂ ಸೋತಿದ್ದೆ. ಕೊನೆಗೂ ನಾನು ಸೆಮಿ ಫೈನಲಿಸ್ಟ್ ಎನಿಸಿಕೊಂಡೆ ಎಂದು ಜೆಸ್ಸಿಕಾ ತನ್ನ ಸಂಭ್ರಮ ವ್ಯಕ್ತಪಡಿಸಿದರು.
ಅಗ್ರ ಶ್ರೇಯಾಂಕಿತೆ ಸ್ವಿಯಾಟೆಕ್ ಪಂದ್ಯದ ಆರಂಭದಲ್ಲಿ ಪರದಾಡಿದಂತೆ ಕಂಡುಬಂದರು. ತನ್ನ ಸರ್ವ್ ನಿರ್ವಹಿಸಲು ಕಷ್ಟಪಟ್ಟಿದ್ದಲ್ಲದೆ, ಹಲವು ಅನಗತ್ಯ ತಪ್ಪೆಸಗಿದರು. ಇದು ಎದುರಾಳಿ ಜೆಸ್ಸಿಕಾಗೆ ಲಾಭ ತಂದಿತು.
ಜೆಸ್ಸಿಕಾ ಪೆಗುಲಾ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಎದುರಾಳಿಗೆ ಹಿಡಿತ ಸಾಧಿಸಲು ಅವಕಾಶ ನೀಡಲಿಲ್ಲ.
ಜೆಸ್ಸಿಕಾ ಸೆಮಿ ಫೈನಲ್ ನಲ್ಲಿ ಕರೊಲಿನಾ ಮುಚೋವಾರನ್ನು ಎದುರಿಸಲಿದ್ದಾರೆ. ಜೆಸ್ಸಿಕಾ ಪಂದ್ಯಾವಳಿಯಲ್ಲಿ ಸೆಮಿ ಫೈನಲ್ ತಲುಪಿದ ಅಮೆರಿಕದ ಎರಡನೇ ಆಟಗಾರ್ತಿಯಾಗಿದ್ದಾರೆ. ಜೆಸ್ಸಿಕಾ ಅವರ ಸಹ ಆಟಗಾರ್ತಿ ಎಮ್ಮಾ ನವಾರೊ ಮಹಿಳೆಯರ ಸಿಂಗಲ್ಸ್ನಲ್ಲಿ ಈಗಾಗಲೇ ಸೆಮಿ ಫೈನಲ್ ತಲುಪಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲೂ ಅಮೆರಿಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಟೇಲರ್ ಫ್ರಿಟ್ಜ್ ಹಾಗೂ ಫಾನ್ಸಿಸ್ ಟಿಯಾಫೊ ಟೂರ್ನಿಯ ಸೆಮಿ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಕರೊಲಿನಾ ಮುಚೋವಾ ಸೆಮಿ ಫೈನಲ್ ಗೆ :
ಝೆಕ್ ಗಣರಾಜ್ಯದ ಆಟಗಾರ್ತಿ ಕರೊಲಿನಾ ಮುಚೋವಾ ಬ್ರೆಝಿಲ್ ನ ಬೀಟ್ರಿಝ್ ಹಡಾದ್ ಮೈಯಾರನ್ನು ಸೋಲಿಸಿ ಸೆಮಿ ಫೈನಲ್ ತಲುಪಿದ್ದಾರೆ.
2023ರ ಯು.ಎಸ್. ಓಪನ್ ನಲ್ಲಿ ಮೊಣಕೈಗೆ ಗಾಯವಾದ ನಂತರ ತನ್ನ ಆರನೇ ಪಂದ್ಯಾವಳಿಯನ್ನು ಆಡುತ್ತಿರುವ ಮುಚೋವಾ ಅವರು ಬೀಟ್ರಿಝ್ ರನ್ನು 6-1, 6-4 ನೇರ ಸೆಟ್ ಗಳಿಂದ ಮಣಿಸಿದರು. ಇದರೊಂದಿಗೆ ಈ ವರ್ಷ ಸತತ ಎರಡನೇ ಬಾರಿ ಅಂತಿಮ-4ರ ಸುತ್ತು ತಲುಪಿದ್ದಾರೆ.
ಮೊದಲ ಸೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ ಮುಚೋವಾ ತಕ್ಷಣವೇ 4-0 ಮುನ್ನಡೆ ಪಡೆದರು. ಬೀಟ್ರಿಝ್ 2ನೇ ಸೆಟ್ ನಲ್ಲಿ ತನ್ನ ಪ್ರದರ್ಶನ ಉತ್ತಮಪಡಿಸಿಕೊಂಡರು. ಹೊಸ ಚೆಂಡುಗಳ ಲಾಭ ಪಡೆದ ಮುಚೋವಾ 2ನೇ ಸೆಟ್ಟನ್ನು ಸುಲಭವಾಗಿ ಗೆದ್ದುಕೊಂಡರು.
ಬೀಟ್ರಿಝ್ ಅಮೆರಿಕನ್ ಓಪನ್ನಲ್ಲಿ 1968ರ ನಂತರ ಕ್ವಾರ್ಟರ್ ಫೈನಲ್ ತಲುಪಿದ ಬ್ರೆಝಿಲ್ ನ ಮೊದಲ ಆಟಗಾರ್ತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದರು.