ಸಿಡ್ನಿ ಟೆಸ್ಟ್: ಆರಂಭಿಕ ಆಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವ ಭಾರತ
PC: x.com/aajtak
ಸಿಡ್ನಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಆರಂಭಿಕ ಆಘಾತ ನೀಡಿದೆ. ನಾಯಕ ರೋಹಿತ್ ಶರ್ಮಾ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿರುವುದರಿಂದ ಆರಂಭಿಕ ಆಟಗಾರನಾಗಿ ಮುಂಬಡ್ತಿ ಪಡೆದಿರುವ ಕೆ.ಎಲ್.ರಾಹುಲ್ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದು, ತಂಡದ ಮೊತ್ತ 11 ಆಗಿದ್ದಾಗ ರಾಹುಲ್(4) ಮಿಚೆಲ್ ಸ್ಟಾರ್ಕ್ ಅವರಿಗೆ ವಿಕೆಟ್ ಒಪ್ಪಿಸಿ ಅಗ್ಗದ ಮೊತ್ತಕ್ಕೆ ನಿರ್ಗಮಿಸಿದರು. ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಬಿಲಾಂಡ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮಹತ್ವದ ಟೆಸ್ಟ್ ನಲ್ಲಿ ಭಾರತ ಆಘಾತಕಾರಿ ಆರಂಭ ಕಂಡಿದೆ.
ತಂಡ 32 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶುಭ್ ಮನ್ ಗಿಲ್ (ನಾಟೌಟ್ 19) ಮತ್ತು ವಿರಾಟ್ ಕೊಹ್ಲಿ (ನಾಟೌಟ್ 11) ಭಾರತದ ಇನ್ನಿಂಗ್ಸ್ ಆಧರಿಸಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಭಾರತ 22 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತ್ತು.
ಸ್ಕಾಟ್ ಬೊಲಾಂಡ್ ಮೊದಲ ಓವರ್ ನಲ್ಲೇ ಜೈಸ್ವಾಲ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ ತಕ್ಷಣ ಮರು ಎಸೆತದಲ್ಲೇ ವಿರಾಟ್ ಕೊಹ್ಲಿ ಜೀವದಾನ ಪಡೆದದ್ದು ಭಾರತದ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ನಾಲ್ಕನೇ ಟೆಸ್ಟ್ ನಿಂದ ಕೈಬಿಡಲಾಗಿದ್ದ ಶುಭ್ ಮನ್ ಗಿಲ್ ನಿಜವಾದ ಅಗ್ನಿಪರೀಕ್ಷೆ ಎದುರಿಸುತ್ತಿದ್ದು, ರಾಹುಲ್ ಔಟ್ ಆದ ತಕ್ಷಣ ಕ್ರೀಸ್ ಗೆ ಬಂದ ಕೊಹ್ಲಿ ಜತೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದು ಕಂಡುಬಂತು.
ಫಾರ್ಮ್ ಕಳೆದುಕೊಂಡಿರುವ ನಾಯಕ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದು, ಜಸ್ ಪ್ರೀತ್ ಬೂಮ್ರಾ ತಂಡವನ್ನು ಮುನ್ನಡೆಸಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಭೂಮ್ರಾ ಬ್ಯಾಟಿಂಗ್ ಆಯ್ದುಕೊಂಡರು. ಸರಣಿಯಲ್ಲಿ ಅತಿಥೇಯ ತಂಡ 2-1 ಮುನ್ನಡೆಯಲ್ಲಿದ್ದು, ಸರಣಿ ಸಮಬಲ ಸಾಧಿಸಲು ಭಾರತಕ್ಕೆ ಕೊನೆಯ ಅವಕಾಶ ಇದೆ.