ಸೈಯದ್ ಮೋದಿ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ; ಪ್ರಿಯಾಂಶು ರಾಜವತ್ ಕ್ವಾಟರ್ ಫೈನಲ್ ಗೆ
ಪ್ರಿಯಾಂಶು ರಾಜವತ್ (Photo: X)
ಲಕ್ನೋ: ಲಕ್ನೋದಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಪ್ರಿಯಾಂಶು ರಾಜವತ್ ಕ್ವಾಟರ್ ಫೈನಲ್ ತಲುಪಿದ್ದಾರೆ. ಅವರು ಪುರುಷರ ಸಿಂಗಲ್ಸ್ನಲ್ಲಿ ಕ್ವಾಟರ್ ಫೈನಲ್ ತಲುಪಿದ ಏಕೈಕ ಭಾರತೀಯ ಆಗಿದ್ದಾರೆ.
ಅದೇ ವೇಳೆ, ಮಹಿಳೆಯರ ಡಬಲ್ಸ್ನಲ್ಲಿ ತ್ರೀಶಾ ಜೊಲ್ಲಿ ಮತ್ತು ಗಾಯತ್ರಿ ಗೋಪಿಚಂದ್ ಕ್ವಾಟರ್ ಫೈನಲ್ ತಲುಪಿದ್ದಾರೆ.
ಈ ವರ್ಷದ ಆರ್ಲೀನ್ಸ್ ಮಾಸ್ಟರ್ನಲ್ಲಿ ಪ್ರಶಸ್ತಿ ಗೆದ್ದಿರುವ ಪ್ರಿಯಾಂಶು, ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ತನ್ನದೇ ದೇಶದ ಸತೀಶ್ ಕುಮಾರ್ ಕರುಣಾಕರನ್ ವಿರುದ್ಧ ಜಯ ಗಳಿಸಿದರು. ಪಂದ್ಯದಲ್ಲಿ ಸತೀಶ್ ಕುಮಾರ್ 18-21, 6-11ರ ಗೇಮ್ಗಳಿಂದ ಹಿನ್ನಡೆಯಲ್ಲಿದ್ದಾಗ ನಿವೃತ್ತರಾದರು. ಆಗ ಪ್ರಿಯಾಂಶುರನ್ನು ವಿಜಯಿಯಾಗಿ ಘೋಷಿಸಲಾಯಿತು.
31ನೇ ವಿಶ್ವ ರ್ಯಾಂಕಿಂಗ್ ಹೊಂದಿರುವ ಪ್ರಿಯಾಂಶು ಕ್ವಾಟರ್ ಫೈನಲ್ ನಲ್ಲಿ ಇಂಡೋನೇಶ್ಯದ ಆಲ್ವಿ ಫರ್ಹಾನ್ರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ, ಕಾಮನ್ವೆಲ್ತ್ ಗೇಮ್ಸ್ನ ಕಂಚಿನ ಪದಕ ವಿಜೇತರಾಗಿರುವ ತ್ರೀಶಾ ಮತ್ತು ಗಾಯತ್ರಿ ತಮ್ಮದೇ ದೇಶದ ಧನ್ಯಾ ನಂದಕುಮಾರ್ ಮತ್ತು ರಿದಿ ಕೌರ್ರನ್ನು 21-9, 21-5 ಗೇಮ್ಗಳಿಂದ ಪರಾಭವಗೊಳಿಸಿದರು.
ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ, ಈ ವರ್ಷ ಡನ್ಮಾರ್ಕ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿರುವ ಕಿರಣ್ ಜಾರ್ಜ್ ತೈವಾನ್ನ ಚಿಯ ಹಾವೊ ಲೀ ವಿರುದ್ಧ ಧೀರೋದಾತ್ತ ಹೋರಾಟ ನೀಡಿದರೂ, ಅಂತಿಮವಾಗಿ 16-21, 21-18, 20-22 ಗೇಮ್ಗಳಿಂದ ಸೋತರು.
ಮಹಿಳಾ ಸಿಂಗಲ್ಸ್ನಲ್ಲಿ 11 ಭಾರತೀಯರು ಭಾಗವಹಿಸಿದ್ದರೂ, ಯಾವುದೇ ಭಾರತೀಯರಿಗೆ ಎರಡನೇ ಸುತ್ತನ್ನು ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ.
ಈ ಋತುವಿನಲ್ಲಿ, ಮಾಲ್ದೀವ್ಸ್ ಇಂಟರ್ನ್ಯಾಶನಲ್ ಪ್ರಶಸ್ತಿ ಗೆದ್ದಿರುವ ಅಶ್ಮಿತಾ ಚಾಲಿಹರನ್ನು ಜಪಾನ್ನ ಆಯಾ ಒಹೊರಿ 21-7, 21-13 ಗೇಮ್ಗಳಿಂದ ಹಿಮ್ಮೆಟ್ಟಿಸಿದರು. 2022ರ ಒಡಿಶಾ ಓಪನ್ ಚಾಂಪಿಯನ್ ಮತ್ತು 2023ರ ಅಬುಧಾಬಿ ಮಾಸ್ಟರ್ಸ್ ವಿಜೇತೆ 16 ವರ್ಷದ ಉನ್ನತಿ ಹೂಡರನ್ನು ಜಪಾನ್ನ ಮಾಜಿ ವಿಶ್ವ ಚಾಂಪಿಯನ್ ನೊಝೊಮಿ ಒಕುಹರ 21-9, 21-13 ಗೇಮ್ಗಳಿಂದ ಸೋಲಿಸಿದರು.