ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಕರ್ನಾಟಕದ ವಿರುದ್ಧ ಸೌರಾಷ್ಟ್ರಕ್ಕೆ 5 ವಿಕೆಟ್ ಜಯ
ಹಾರ್ವಿಕ್ ದೇಸಾಯಿ ಅರ್ಧಶತಕ
ಹಾರ್ವಿಕ್ ದೇಸಾಯಿ | PC : thehindu.com
ಇಂದೋರ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬುಧವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ತನ್ನ ಕಳಪೆ ಪ್ರದರ್ಶನಕ್ಕೆ ತಕ್ಕ ಬೆಲೆ ತೆತ್ತಿದೆ. ಎದುರಾಳಿ ಸೌರಾಷ್ಟ್ರ ತಂಡವು ಐದು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ.
ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವನ್ನು ನಾಯಕ ಜಯದೇವ್ ಉನಾದ್ಕಟ್(2-17) ನೇತೃತ್ವದ ಸೌರಾಷ್ಟ್ರ ತಂಡದ ಬೌಲರ್ಗಳು 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 171 ರನ್ಗೆ ನಿಯಂತ್ರಿಸಿದರು. ಆರಂಭಿಕ ಬ್ಯಾಟರ್ ಹಾರ್ವಿಕ್ ದೇಸಾಯಿ 60 ರನ್(43 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿ ಸೌರಾಷ್ಟ್ರ ತಂಡ 18.1 ಓವರ್ಗಳಲ್ಲಿ 173 ರನ್ ಗಳಿಸಲು ನೆರವಾದರು.
ಪ್ರೇರಕ್ ಮಂಕಡ್(25 ರನ್), ವಿಶ್ವರಾಜ್ ಜಡೇಜ(ಔಟಾಗದೆ 18), ಜಯ ಗೊಹಿಲ್(ಔಟಾಗದೆ 15) ಗೆಲುವಿಗೆ ಕಾಣಿಕೆ ನೀಡಿದರು. ಕರ್ನಾಟಕದ ಬೌಲಿಂಗ್ ನಲ್ಲಿ ವಿದ್ಯಾಧರ ಪಾಟೀಲ್(2-39)ಎರಡು ವಿಕೆಟ್ ಪಡೆದರು.
ಕರ್ನಾಟಕ ತಂಡವು 3 ಪಂದ್ಯಗಳಲ್ಲಿ 2ನೇ ಸೋಲು ಕಂಡಿದ್ದು, ಟಿ-20 ಸ್ಪರ್ಧಾವಳಿಯಲ್ಲಿ ನಾಕೌಟ್ ಹಂತಕ್ಕೇರುವ ಅವಕಾಶಕ್ಕೆ ಈ ಸೋಲಿನಿಂದ ಧಕ್ಕೆಯಾಗಿದೆ.
ಕರ್ನಾಟಕ ತಂಡವು ಮೊದಲ 4 ಓವರ್ಗಳಲ್ಲಿ 16 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಶ್ರೇಯಸ್ ಗೋಪಾಲ್(36 ರನ್, 22 ಎಸೆತ) ಹಾಗೂ ಕೆ.ಎಲ್.ಶ್ರೀಜಿತ್(31 ರನ್, 27 ಎಸೆತ) 4ನೇ ವಿಕೆಟ್ಗೆ 63 ರನ್ ಸೇರಿಸಿ ಸ್ವಲ್ಪ ಪ್ರತಿರೋಧ ಒಡ್ಡಿದರು.
ಶ್ರೀಜಿತ್ ನಿರ್ಗಮಿಸಿದಾಗ ಕರ್ನಾಟಕ ತಂಡ 83 ರನ್ಗೆ 5 ವಿಕೆಟ್ ಕಳೆದುಕೊಂಡಿತು. 7ನೇ ಕ್ರಮಾಂಕದಲ್ಲಿ ಆಡಿರುವ 23ರ ಹರೆಯದ ಶುಭಾಂಗ್ ಹೆಗ್ಡೆ 22 ಎಸೆತಗಳಲ್ಲಿ 2 ಬೌಂಡರಿ, ಮೂರು ಸಿಕ್ಸರ್ಗಳ ಸಹಿತ 43 ರನ್ ಗಳಿಸಿ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ರನ್ ಚೇಸ್ ವೇಳೆ 6 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ ಜಯದೇವ್ ಉನಾದ್ಕಟ್ ನೇತೃತ್ವದ ಸೌರಾಷ್ಟ್ರ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ದೇಸಾಯಿ 37 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
13ನೇ ಹಾಗೂ 16ನೇ ಓವರ್ ಮಧ್ಯೆ ಮೂರು ವಿಕೆಟ್ಗಳು ಉರುಳಿದಾಗ ಸೌರಾಷ್ಟ್ರ ತಂಡ ಅತಂಕಕ್ಕೆ ಒಳಗಾಗಿತ್ತು. ಆದರೆ ವಿಶ್ವರಾಜ್ ಸಿನ್ಹಾ ಜಡೇಜ ಲಾಂಗ್ಆನ್ನತ್ತ ಸಿಕ್ಸರ್ ಸಿಡಿಸಿ ತನ್ನದೇ ಶೈಲಿಯಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ಗಳಲ್ಲಿ 171/8
(ಶುಭಾಂಗ್ ಹೆಗ್ಡೆ 43, ಶ್ರೇಯಸ್ ಗೋಪಾಲ್ 36, ಕೆ.ಶ್ರೀಜಿತ್ 31, ಜಯದೇವ್ ಉನಾದ್ಕಟ್ 2-17, ಪ್ರೇರಕ್ ಮಂಕಡ್ 2-29, ಚಿರಾಗ್ ಜಾನಿ 2-38)
ಸೌರಾಷ್ಟ್ರ: 18.1 ಓವರ್ಗಳಲ್ಲಿ 173/5
(ಹಾರ್ವಿಕ್ ದೇಸಾಯಿ 60, ಪ್ರೇರಕ್ ಮಂಕಡ್ 25, ವಿಶ್ವರಾಜ್ ಜಡೇಜ ಔಟಾಗದೆ 18, ಜಯ ಗೋಹಿಲ್ ಔಟಾಗದೆ 15, ವಿದ್ಯಾಧರ ಪಾಟೀಲ್ 2-39)