ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಮತ್ತೊಂದು ಬಿರುಸಿನ ಶತಕ ದಾಖಲಿಸಿದ ಉರ್ವಿಲ್ ಪಟೇಲ್
ಉರ್ವಿಲ್ ಪಟೇಲ್ | PC : @GCAMotera | X
ಇಂದೋರ್: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಗುಜರಾತ್ ಬ್ಯಾಟರ್ ಉರ್ವಿಲ್ ಪಟೇಲ್ ಅವರು ಉತ್ತರಾಖಂಡ ತಂಡದ ವಿರುದ್ಧ ಮಂಗಳವಾರ ಕೇವಲ 36 ಎಸೆತಗಳಲ್ಲಿ ಮತ್ತೊಂದು ಬಿರುಸಿನ ಶತಕ ದಾಖಲಿಸಿದ್ದಾರೆ.
ಬಲಗೈ ಬ್ಯಾಟರ್ ಪಟೇಲ್ ಮೂರು ಪಂದ್ಯಗಳಲ್ಲಿ ಗಳಿಸಿರುವ 2ನೇ ಶತಕ ಇದಾಗಿದೆ. ಈ ಹಿಂದೆ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಟಿ-20 ಕ್ರಿಕೆಟ್ನಲ್ಲಿ ವೇಗವಾಗಿ ಶತಕ ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿದ್ದರು. ಟಿ-20 ಕ್ರಿಕೆಟ್ನಲ್ಲಿ ವೇಗವಾಗಿ ಶತಕ ಗಳಿಸಿರುವ ಭಾರತದ ಅಗ್ರ-ಐವರು ಬ್ಯಾಟರ್ಗಳ ಪೈಕಿ ಉರ್ವಿಲ್ ಎರಡು ಬಾರಿ ಈ ಸ್ಥಾನ ಪಡೆದಿದ್ದಾರೆ.
ಉರ್ವಿಲ್ ಪಟೇಲ್ ಕೇವಲ 41 ಎಸೆತಗಳಲ್ಲಿ 115 ರನ್ ಗಳಿಸಿದ್ದು, ಇದರಲ್ಲಿ 8 ಬೌಂಡರಿ ಹಾಗೂ 11 ಸಿಕ್ಸರ್ಗಳಿವೆ. ಪಟೇಲ್ ಶತಕದ ನೆರವಿನಿಂದ ಗುಜರಾತ್ ತಂಡ 8 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ. ಆರು ಪಂದ್ಯಗಳಲ್ಲಿ 5ನೇ ಗೆಲುವು ಪಡೆದು ಸಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಇನ್ನೊಂದು ಲೀಗ್ ಪಂದ್ಯ ಆಡಲು ಬಾಕಿ ಇದೆ.
30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಉರ್ವಿಲ್ ಪಟೇಲ್ ಕಳೆದ ತಿಂಗಳು ಸೌದಿ ಅರೇಬಿಯದಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಈ ಹಿಂದೆ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. 2023ರ ಹರಾಜಿನಲ್ಲಿ ಗುಜರಾತ್ ತಂಡವು 20 ಲಕ್ಷ ರೂ.ಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.
► ಟಿ-20 ಕ್ರಿಕೆಟ್ನಲ್ಲಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರರು
ಹೆಸರು ಪಂದ್ಯ ಎಸೆತಗಳು ಟೂರ್ನಿ ವರ್ಷ
ಉರ್ವಿಲ್ ಪಟೇಲ್ ಗುಜರಾತ್-ತ್ರಿಪುರಾ 28 ಮುಷ್ತಾಕ್ ಅಲಿ ಟ್ರೋಫಿ 2024
ರಿಷಭ್ ಪಂತ್ ದಿಲ್ಲಿ-ಹಿಮಾಚಲ 32 ಮುಷ್ತಾಕ್ ಅಲಿ ಟ್ರೋಫಿ 2018
ರೋಹಿತ್ ಶರ್ಮಾ ಭಾರತ-ಶ್ರೀಲಂಕಾ 35 ಟಿ-20 ಪಂದ್ಯ 2017
ಉರ್ವಿಲ್ ಪಟೇಲ್ ಗುಜರಾತ್-ಉತ್ತರಾಖಂಡ 36 ಮುಷ್ತಾಕ್ ಅಲಿ ಟ್ರೋಫಿ 2024
ಯೂಸುಫ್ ಪಠಾಣ್ ರಾಜಸ್ಥಾನ-ಮುಂಬೈ 37 ಐಪಿಎಲ್ 2010