ಇಂಗ್ಲೆಂಡ್ ವಿರುದ್ಧ ಟಿ-20 ಸರಣಿ: ವೆಸ್ಟ್ಇಂಡೀಸ್ ಕ್ರಿಕೆಟ್ ತಂಡ ಪ್ರಕಟ
PC : hindustantimes
ಬಾರ್ಬಡೋಸ್: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟಿ-20 ಅಂತರ್ರಾಷ್ಟ್ರೀಯ ಪಂದ್ಯಕ್ಕೆ ಕ್ರಿಕೆಟ್ ವೆಸ್ಟ್ಇಂಡೀಸ್(ಸಿಡಬ್ಲ್ಯುಐ)15 ಸದಸ್ಯರ ತಂಡವನ್ನು ಇತ್ತೀಚೆಗೆ ಪ್ರಕಟಿಸಿದೆ.
ಪಂದ್ಯಗಳು ಬಾರ್ಬಡೋಸ್ನ ನವೀಕೃತ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ವೆಸ್ಟ್ಇಂಡೀಸ್ ಟಿ-20 ತಂಡ ತವರು ಮೈದಾನದಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುತ್ತಿದ್ದು, 2023ರ ಆರಂಭದಿಂದ 4 ಟಿ-20 ಅಂತರ್ರಾಷ್ಟ್ರೀಯ ಸರಣಿಗಳಲ್ಲಿ ಅಜೇಯ ಗೆಲುವಿನ ದಾಖಲೆ ಉಳಿಸಿಕೊಂಡಿದೆ.
ವೆಸ್ಟ್ಇಂಡೀಸ್ ತಂಡ ತನ್ನ ಗೆಲುವಿನ ಓಟವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಮುಖ್ಯ ಕೋಚ್ ಡರೆನ್ ಸಾಮಿ ಹೇಳಿದ್ದಾರೆ.
ಇತ್ತೀಚೆಗಿನ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದ ಅಕೀಲ್ ಹುಸೈನ್, ಶಿಮ್ರೊನ್ ಹೆಟ್ಮೆಯರ್, ನಿಕೊಲಸ್ ಪೂರನ್ ಹಾಗೂ ಆಂಡ್ರೆ ರಸೆಲ್ ತಂಡಕ್ಕೆ ವಾಪಸಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇತ್ತೀಚೆಗೆ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿರುವ ಮಧ್ಯಮ ವೇಗದ ಬೌಲರ್ ಮ್ಯಾಥ್ಯೂ ಫೋರ್ಡ್ರನ್ನು ಅಲ್ಜಾರಿ ಜೋಸೆಫ್ ಬದಲಿಗೆ ಆಯ್ಕೆ ಮಾಡಲಾಗಿದೆ. ಅಮಾನತುಗೊಂಡಿರುವ ಜೋಸೆಫ್ ಎರಡು ಪಂದ್ಯದಿಂದ ವಂಚಿತರಾಗಿದ್ದಾರೆ.
5 ಪಂದ್ಯಗಳ ಟಿ-20 ಸರಣಿಯು ನವೆಂಬರ್ 9ರಿಂದ ಬಾರ್ಬಡೋಸ್ನಲ್ಲಿ ಆರಂಭವಾಗಲಿದ್ದು, ಸರಣಿಯ 2ನೇ ಪಂದ್ಯವು ನ.10ರಂದು ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿದೆ.
ಸರಣಿಯ ಕೊನೆಯ 3 ಪಂದ್ಯಗಳು ಕ್ರಮವಾಗಿ ನ.14,16 ಹಾಗೂ 17ರಂದು ನಡೆಯಲಿವೆ.
ಇಂಗ್ಲೆಂಡ್ ವಿರುದ್ಧ ಮೊದಲೆರಡು ಟಿ-20 ಪಂದ್ಯಕ್ಕೆ ವೆಸ್ಟ್ಇಂಡೀಸ್ ತಂಡ:
ರೋವ್ಮನ್ ಪೊವೆಲ್(ನಾಯಕ), ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಟೆರನ್ಸ್ ಹಿಂಡ್ಸ್,. ಶಾಯ್ ಹೋಪ್, ಅಕೀಲ್ ಹುಸೈನ್, ಶಮರ್ ಜೋಸೆಫ್, ಬ್ರೆಂಡನ್ ಕಿಂಗ್, ಎವಿನ್ ಲೆವಿಸ್, ಗುಡಕೇಶ್ ಮೋಟಿ, ನಿಕೊಲಸ್ ಪೂರನ್, ಆಂಡ್ರೆ ರಸೆಲ್, ಶೆರ್ಫನ್ ರುದರ್ಫೋರ್ಡ್ ಹಾಗೂ ರೊಮಾರಿಯೊ ಶೆಫರ್ಡ್.