ಟಿ20 ಕ್ರಿಕೆಟ್: ವೇಗವಾಗಿ 3,000 ರನ್ ಪೂರೈಸಿದ ಮುಹಮ್ಮದ್ ರಿಝ್ವಾನ್
ಮುಹಮ್ಮದ್ ರಿಝ್ವಾನ್ | PC ; X
ರಾವಲ್ಪಿಂಡಿ: ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಟಿ20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 3,000 ರನ್ ಪೂರೈಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
31ರ ಹರೆಯದ ರಿಝ್ವಾನ್ 19 ರನ್ ತಲುಪಿದಾಗ ಈ ಮೈಲಿಗಲ್ಲು ತಲುಪಿದ್ದಾರೆ. ಔಟಾಗದೆ 45 ರನ್(34 ಎಸೆತ, 1 ಸಿಕ್ಸರ್, 4 ಬೌಂಡರಿ) ಗಳಿಸಿದ್ದ ರಿಝ್ವಾನ್ ಪಾಕಿಸ್ತಾನ ತಂಡ 91 ರನ್ ಸಾಧಾರಣ ಮೊತ್ತವನ್ನು 12.1 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ ಅಂತರದಿಂದ ಜಯ ಸಾಧಿಸುವಲ್ಲಿ ನೆರವಾದರು.
ಎಡಗೈ ವೇಗಿಗಳಾದ ಶಾಹೀನ್ ಶಾ ಅಫ್ರಿದಿ(3-13) ಹಾಗೂ ಮುಹಮ್ಮದ್ ಆಮಿರ್(2-13) ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿ ಕಿವೀಸ್ ತಂಡವನ್ನು 18.1 ಓವರ್ಗಳಲ್ಲಿ ಕೇವಲ 90 ರನ್ಗೆ ನಿಯಂತ್ರಿಸಿದರು. ಸುಮಾರು 4 ವರ್ಷಗಳ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಿರುವ ಆಮಿರ್ 13 ರನ್ಗೆ 2 ವಿಕೆಟ್ ಉರುಳಿಸಿದರು. ಸ್ಪಿನ್ನರ್ಗಳಾದ ಅಬ್ರಾರ್ ಅಹ್ಮದ್(2-15) ಹಾಗೂ ಶಾದಾಬ್ ಖಾನ್(2-15) ತಲಾ ಎರಡು ವಿಕೆಟ್ ಕಬಳಿಸಿ ನ್ಯೂಝಿಲ್ಯಾಂಡ್ ತಂಡದ ಒತ್ತಡವನ್ನು ಹೆಚ್ಚಿಸಿದರು.
ನ್ಯೂಝಿಲ್ಯಾಂಡ್ 2010ರಲ್ಲಿ ಕ್ರೈಸ್ಟ್ಚರ್ಚ್ನಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ಪಂದ್ಯದಲ್ಲಿ ಕನಿಷ್ಠ ಸ್ಕೋರ್(80 ರನ್)ಗಳಿಸಿತ್ತು.
ತನ್ನ 79ನೇ ಟಿ20 ಇನಿಂಗ್ಸ್ನಲ್ಲಿ 3 ಸಾವಿರ ರನ್ ಪೂರೈಸಿದ ರಿಝ್ವಾನ್ ತನ್ನ ನಾಯಕ ಬಾಬರ್ ಆಝಮ್ ಹಾಗೂ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಈ ಇಬ್ಬರು 81 ಟಿ20 ಇನಿಂಗ್ಸ್ಗಳಲ್ಲಿ 3,000 ರನ್ ಪೂರೈಸಿದ್ದಾರೆ.
ರಿಝ್ವಾನ್ ಟಿ20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 3,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 8ನೇ ಬ್ಯಾಟರ್ ಆಗಿದ್ದಾರೆ. ಕೊಹ್ಲಿ 117 ಪಂದ್ಯಗಳಲ್ಲಿ 4,037 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾಗಿದ್ದು, ಎರಡನೇ ಪಂದ್ಯ ಜಯಿಸಿರುವ ಪಾಕಿಸ್ತಾನ ಸದ್ಯ 1-0 ಮುನ್ನಡೆಯಲ್ಲಿದೆ.