ಭಾರತದ ವಿರುದ್ಧ ಟಿ20 ಸರಣಿ | ಇಂಗ್ಲೆಂಡ್ ಗೆ 26 ರನ್ ಗೆಲುವು
ವರುಣ್ ಚಕ್ರವರ್ತಿಯ 5 ವಿಕೆಟ್ ಗೊಂಚಲು ವ್ಯರ್ಥ

PC | ICC
ರಾಜ್ಕೋಟ್: ಭಾರತದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ಮಂಗಳವಾರ 26 ರನ್ಗಳಿಂದ ಗೆದ್ದಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 20 ಓವರ್ಗಳಲ್ಲಿ 172 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ಭಾರತಕ್ಕೆ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 145 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗ 2-1ರಿಂದ ಮುಂದಿದೆ. ಮೊದಲ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.
ಭಾರತವು ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. 40 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಭಾರತದ ಗರಿಷ್ಠ ಸ್ಕೋರ್ ಗಳಿಕೆದಾರರರಾದರು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಅಭಿಶೇಕ್ ಶರ್ಮಾ 24 ರನ್ಗಳನ್ನು ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ (14) ಮತ್ತೊಮ್ಮೆ ಕಳಪೆ ನಿರ್ವಹಣೆ ನೀಡಿದರು.
ಕೆಳ ಕ್ರಮಾಂಕದ ಬ್ಯಾಟರ್ಗಳು ಕ್ರೀಸ್ಗೆ ಬಂದು ಹೋದರು.ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (24) ಮತ್ತು ಬೆನ್ ಡಕೆಟ್ (51)ರ ಅಮೋಘ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ ಸವಾಲಿನ 171 ರನ್ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಭಾರತೀಯ ಸ್ಪಿನ್ನರ್ ವರುಣ್ ಚಕ್ರವರ್ತಿ ಐದು ವಿಕೆಟ್ಗಳ ಗೊಂಚಿಲು ಪಡೆದರು.
ಬಟ್ಲರ್ ಮತ್ತು ಡಕೆಟ್ ಎರಡನೇ ವಿಕೆಟ್ಗೆ 45 ಎಸೆತಗಳಲ್ಲಿ 76 ರನ್ಗಳನ್ನು ಸೇರಿಸಿದರು. ಬಟ್ಲರ್ ಬಳಿಕ ವರುಣ್ ಚಕ್ರವರ್ತಿಯ ಎಸೆತದಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಅದ್ಭುತ್ ಕ್ಯಾಚ್ಗೆ ಬಲಿಯಾಗಿ ಹಿಂದಿರುಗಿದರು.
ಡಕೆಟ್ 26 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಆದರೆ, ಶೀಘ್ರವೇ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಅವರು 28 ಎಸೆತಗಳಲ್ಲಿ 51 ರನ್ಗಳನ್ನು ಗಳಿಸಿದರು.
ಆರಂಭಿಕ ಫಿಲ್ ಸಾಲ್ಟ್ರನ್ನು ಹಾರ್ದಿಕ್ ಪಾಂಡ್ಯ ಎರಡನೇ ಓವರ್ನಲ್ಲೇ ಬಲಿ ಪಡೆದ ಬಳಿಕ, ಇಂಗ್ಲೆಂಡ್ ಉತ್ತಮ ಆಟವನ್ನು ಪ್ರದರ್ಶಿಸಿ ಭಾರತೀಯರ ಮೇಲೆ ಒತ್ತಡ ಹೇರಿತು.
ಲಿಯಮ್ ಲಿವಿಂಗ್ಸ್ಟೋನ್ ಆಕ್ರಮಣಕಾರಿ ಆಟದ ಮೂಲಕ ಭಾರತೀಯ ಬೌಲರ್ಗಳ ಮೇಲೆ ಒತ್ತಡ ಹೇರಿದರು. ಅವರು 24 ಎಸೆತಗಳಲ್ಲಿ 43 ರನ್ಗಳನ್ನು ಸಿಡಿಸಿದರು.
ಒಂದು ಹಂತದಲ್ಲಿ ವರುಣ್ ಚಕ್ರವರ್ತಿ ಎದುರಾಳಿ ಬೌಲರ್ಗಳ ಮೇಲೆ ನಿರಂತರ ಒತ್ತಡ ಹೇರಿದರು. ಇಂಗ್ಲೆಂಡ್ 7 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು.