ಟಿ20 ವಿಶ್ವಕಪ್ ಕ್ರಿಕೆಟ್: ದಕ್ಷಿಣ ಆಫ್ರಿಕಾಗೆ ಸುಲಭದ ತುತ್ತಾದ ಶ್ರೀಲಂಕಾ
Photo credit: icc-cricket.com
ನ್ಯೂಯಾರ್ಕ್: ಟಿ20 ವಿಶ್ವಕಪ್ನ ನಾಲ್ಕನೇ ಪಂದ್ಯದಲ್ಲಿ ಸೋಮವಾರ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾವನ್ನು ಆರು ವಿಕೆಟ್ಗಳಿಂದ ಸುಲಭವಾಗಿ ಸೋಲಿಸಿದೆ.
ನ್ಯೂಯಾರ್ಕ್ನ ನಸ್ಸವ್ ಕೌಂಟಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 19.1 ಓವರ್ಗಳಲ್ಲಿ ಕೇವಲ 77 ರನ್ ಗಳಿಗೆ ಆಲೌಟ್ ಆಯಿತು. ಸುಲಭ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.2 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು.
ಶ್ರೀಲಂಕಾ ಪರ ಕುಶಾಲ್ ಮೆಂಡಿಸ್ (19), ಕಮಿಂದು ಮೆಂಡಿಸ್ (11) ಮತ್ತು ಮ್ಯಾಥ್ಯೂಸ್ (16) ಮಾತ್ರ ಎರಡಂಕಿ ತಲುಪಿದರು. ಬಿಗಿ ಬೌಲಿಂಗ್ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ ಪರ ನೋರ್ಜೆ ನಾಲ್ಕು ಓವರ್ ಗಳಲ್ಲಿ ಕೇವಲ 7 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ರಬಡ 21ಕ್ಕೆ 2, ಮಹಾರಾಜ್ 22ಕ್ಕೆ 2 ವಿಕೆಟ್ ಕಿತ್ತು ಎದುರಾಳಿ ತಂಡದ ಪತನಕ್ಕೆ ಕಾರಣರಾದರು.
ಆಫ್ರಿಕಾ ತಂಡ ಕ್ವಿಂಟನ್ ಡಿಕಾಕ್ (20), ರೀಝಾ ಹೆಂಡ್ರಿಕ್, ಈಡನ್ ಮ್ಯಾಕ್ರಮ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರನ್ನು 58 ರನ್ ಗಳಿಗೆ ಕಳೆದುಕೊಂಡರೂ ಹೆನ್ರಿಚ್ ಕ್ಲಾಸನ್ (ನಾಟೌಟ್ 19) ಮತ್ತು ಡೇವಿಡ್ ಮುಲ್ಲರ್ (ನಾಟೌಟ್ 6) ಗೆಲುವಿನ ದಡ ಸೇರಿಸಿದರು.
ಕೇವಲ 7 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದ ನೋರ್ಜೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.