ಟಿ20 ವಿಶ್ವಕಪ್ | ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದು ಅನುಮಾನ
ವಿರಾಟ್ ಕೊಹ್ಲಿ |PTI
ಹೊಸದಿಲ್ಲಿ: ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಮೆರಿಕಕ್ಕೆ ಇನ್ನಷ್ಟೇ ತೆರಳಬೇಕಾಗಿದೆ. ನಾಲ್ವರು ಮೀಸಲು ಆಟಗಾರರು ಸೇರಿದಂತೆ ಇತರ 18 ಕ್ರಿಕೆಟಿಗರು ಬುಧವಾರ ನ್ಯೂಯಾರ್ಕ್ನಲ್ಲಿ ತಮ್ಮ ತರಬೇತಿಯನ್ನು ಆರಂಭಿಸಿದ್ದಾರೆ.
ಕೊಹ್ಲಿ ಅವರು ಇತ್ತೀಚೆಗೆ ತನ್ನ ಪತ್ನಿ ಅನುಷ್ಕಾ ಶರ್ಮಾ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಝಹೀರ್ ಖಾನ್ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಎರಡು ತಿಂಗಳ ಕಾಲ ಐಪಿಎಲ್ನಲ್ಲಿ ಆಡಿದ್ದ ಕೊಹ್ಲಿ ವಿರಾಮವನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದಾರೆ.
ಕೊಹ್ಲಿ ಯಾವಾಗ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ತೆರಳುತ್ತಾರೆಂಬ ಬಗ್ಗೆ ಬಿಸಿಸಿಐ ವಿವರಣೆ ನೀಡಿಲ್ಲ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಕೊಹ್ಲಿ ಮೇ 22ರಂದು ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ತನ್ನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊನೆಯ ಪಂದ್ಯ ಆಡಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿದ್ದ ಆರ್ಸಿಬಿ ಟೂರ್ನಿಯಿಂದ ನಿರ್ಗಮಿಸಿತ್ತು.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ ಕೊಹ್ಲಿ ಶುಕ್ರವಾರ ನ್ಯೂಯಾರ್ಕ್ ತಲುಪುವ ನಿರೀಕ್ಷೆ ಇದೆ. ಆರ್ಸಿಬಿ ತಂಡ ಐಪಿಎಲ್ನಿಂದ ನಿರ್ಗಮಿಸಿದ ನಂತರ ವೈಯಕ್ತಿಕ ಕೆಲಸಕ್ಕಾಗಿ ಕೊಹ್ಲಿ ಸ್ವಲ್ಪ ವಿರಾಮ ಪಡೆದಿದ್ದಾರೆ. ಅವರು ಶುಕ್ರವಾರದಂದು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.
ಭಾರತ ಜೂನ್ 1ರಂದು ಶನಿವಾರ ಬಾಂಗ್ಲಾದೇಶ ವಿರುದ್ಧ ಆಡಲಿರುವ ಏಕೈಕ ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಲಭ್ಯವಾಗುವ ಕುರಿತು ಅನುಮಾನ ಇದೆ.
ದೀರ್ಘ ಸಮಯ ವಿಮಾನದಲ್ಲಿ ಪ್ರಯಾಣಿಸಿದ ನಂತರ ಶನಿವಾರ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಭಾಗವಹಿಸುವ ಕುರಿತಂತೆ ಸ್ಪಷ್ಟತೆ ಇಲ್ಲ ಎಂದು ಪಿಟಿಐ ವರದಿ ಮಾಡಿದೆ.
ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. 15 ಪಂದ್ಯಗಳಲ್ಲಿ 154.70ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 741 ರನ್ ಗಳಿಸಿದ್ದಾರೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಎರಡನೇ ಬಾರಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡ ನ್ಯೂಯಾರ್ಕ್ನಲ್ಲಿ ಐರ್ಲ್ಯಾಂಡ್ ವಿರುದ್ಧ ಜೂನ್ 5ರಂದು ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಬಹುನಿರೀಕ್ಷಿತ ಪಂದ್ಯವನ್ನು ಆಡಲಿದೆ. ಜೂನ್ 15ರಂದು ಕೆನಡಾ ವಿರುದ್ಧ ಲ್ಲಿ ಆಡಲು ಫ್ಲೋರಿಡಾಕ್ಕೆ ತೆರಳುವ ಮೊದಲು ಜೂನ್ 12ರಂದು ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ.