ಟಿ20 ವಿಶ್ವಕಪ್ | ನ್ಯೂಝಿಲ್ಯಾಂಡ್ ತಂಡ ಪ್ರಕಟ, ವಿಲಿಯಮ್ಸನ್ಗೆ ನಾಯಕತ್ವ
ಕೇನ್ ವಿಲಿಯಮ್ಸನ್ | PC : PTI
ವೆಲ್ಲಿಂಗ್ಟನ್: ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ಈ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಕೇನ್ ವಿಲಿಯಮ್ಸನ್ಗೆ ನಾಯಕತ್ವದ ಹೊಣೆ ವಹಿಸಲಾಗಿದೆ. ಬೆನ್ ಸಿಯರ್ಸ್ ಬದಲಿಗೆ ವೇಗದ ಬೌಲರ್ ಮ್ಯಾಟ್ ಹೆನ್ರಿಗೆ ಅವಕಾಶ ಕಲ್ಪಿಸಲಾಗಿದೆ.
ನ್ಯೂಝಿಲ್ಯಾಂಡ್ ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯುಸನ್ ಅವರಿದ್ದಾರೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಡಮ್ ಮಿಲ್ನೆ ಹಾಗೂ ಗಾಯಗೊಂಡಿರುವ ಕೈಲ್ ಜಮೀಸನ್ ತಂಡಕ್ಕೆ ಅಲಭ್ಯರಾಗಿದ್ದಾರೆ.
ವಿಲಿಯಮ್ಸನ್ ನಾಲ್ಕನೇ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ತಂಡದ ನೇತೃತ್ವವಹಿಸಿದ್ದಾರೆ. 2021ರಲ್ಲಿ ಫೈನಲ್ ಹಾಗೂ ಕಳೆದ ಮೂರು ಟೂರ್ನಮೆಂಟ್ಗಳಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ನ್ಯೂಝಿಲ್ಯಾಂಡ್ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಲು ವಿಲಿಯಮ್ಸನ್ ಪ್ರಯತ್ನಿಸಲಿದ್ದಾರೆ.
ತಂಡದಲ್ಲಿ ಅನುಭವಿ ಆಟಗಾರರಿಗೆ ಮಣೆ ಹಾಕಲಾಗಿದೆ. ಟ್ರೆಂಟ್ ಬೌಲ್ಟ್ ತನ್ನ 5ನೇ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಸೌಥಿ ಹಾಗೂ ಬ್ಯಾಟಿಂಗ್ ಶಕ್ತಿ ವಿಲಿಯಮ್ಸನ್ ಕ್ರಮವಾಗಿ 7ನೇ ಹಾಗೂ ಆರನೇ ಬಾರಿ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಐಪಿಎಲ್ನಿಂದ ಹೊರಗುಳಿದಿದ್ದ ಕಾನ್ವೆ ಸದ್ಯ ಹೆಬ್ಬೆರಳ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ನ ಪ್ರಮುಖ ವಿಕೆಟ್ಕೀಪರ್ ಹಾಗೂ ಆರಂಭಿಕ ಆಟಗಾರನಾಗಿದ್ದಾರೆ.
15 ಸದಸ್ಯರ ತಂಡದಲ್ಲಿ 13 ಸದಸ್ಯರಿಗೆ ಇತ್ತೀಚೆಗೆ ಕೆರಿಬಿಯನ್ನಾಡಿನಲ್ಲಿ ಆಡಿದ ಅನುಭವವಿದೆ. ಇವರೆಲ್ಲರೂ 2022ರಲ್ಲಿ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದ ನ್ಯೂಝಿಲ್ಯಾಂಡ್ ತಂಡದಲ್ಲಿದ್ದರು.
ನ್ಯೂಝಿಲ್ಯಾಂಡ್ ತಂಡ
ಕೇನ್ ವಿಲಿಯಮ್ಸನ್(ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕಲ್ ಬ್ರೆಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಾಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥೀ.