ಟಿ20 ವಿಶ್ವಕಪ್ ಸೆಮಿಫೈನಲ್: 56ಕ್ಕೆ ಅಫ್ಘಾನಿಸ್ತಾನ ಆಲೌಟ್
ಟರೋಬಾ: ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 11.5 ಓವರ್ ಗಳಲ್ಲಿ ಕೇವಲ 56 ರನ್ ಗಳಿಗೆ ಆಲೌಟ್ ಆಗಿದೆ.
ದಕ್ಷಿಣ ಆಫ್ರಿಕಾ ಬೌಲರ್ಗಳ ಸಂಘಟಿತ ದಾಳಿಗೆ ಬೆಚ್ಚಿದ ಕ್ರಿಕೆಟ್ ಶಿಶುಗಳು ಪೆವಿಲಿಯನ್ ಪರೇಡ್ ನಡೆಸಿದರು. ಆಫ್ರಿಕಾ ಪರ ಮಾರ್ಕೊ ಜಾನ್ಸನ್ (16ಕ್ಕೆ 3) ತಬ್ರೇಝ್ ಶಮ್ಸಿ (6ಕ್ಕೆ 3), ರಬಡಾ (14ಕ್ಕೆ 2) ಮತ್ತು ನೋರ್ಜೆ (7ಕ್ಕೆ 2) ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಕಿತ್ತರು.
ಅಫ್ಘಾನ್ ಪರ ಅಜ್ಮತ್ತಲ್ಲಾ ಉಮರ್ಜಿ (10) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಮೂವರು ಆಟಗಾರರು ಶೂನ್ಯಕ್ಕೆ ಪೆವಿಲಿಯನ್ ಗೆ ವಾಪಸ್ಸಾದರೆ ಮೂವರು ತಲಾ ಎರಡು ರನ್ ಗಳಿಸಿದರು.
ಅಫ್ಘಾನಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಮಾರ್ಕೊ ಜಾನ್ಸನ್ ಮೊದಲ ಓವರ್ ನಲ್ಲೇ ಅಪಾಯಕಾರಿ ಬ್ಯಾಟ್ಸ್ ಮನ್ ರಹಮತ್ತುಲ್ಲಾ ಗರ್ಬೇಝ್ ಅವರ ವಿಕೆಟ್ ಕಿತ್ತರು. ಮೂರನೇ ಓವರ್ ನಲ್ಲಿ ಜಾನ್ಸನ್ ಅವರು ಗುಲ್ಬದದೀನ್ ನಯೀಬ್ (9) ಅವರ ವಿಕೆಟ್ ಕೀಳುವ ಮೂಲಕ ಮತ್ತೊಂದು ಆಘಾತ ನೀಡಿದರು. ನಾಲ್ಕನೇ ಓವರ್ ನಲ್ಲಿ ರಬಡಾ ಎರಡು ಕಿತ್ತರು. 28 ರನ್ ಗಳಾಗುವಷ್ಟರಲ್ಲೇ ಪ್ರಮುಖ ಆರು ವಿಕೆಟ್ ಗಳನ್ನು ಅಫ್ಘಾನಿಸ್ತಾನ ಕಳೆದುಕೊಂಡಿತು. ಇದು ವಿಶ್ವಕಪ್ ಸೆಮಿಫೈನಲ್ ನ ಕನಿಷ್ಠ ಮೊತ್ತವಾಗಿದೆ.