ಟಿ20 ವಿಶ್ವಕಪ್: ನ್ಯೂಯಾರ್ಕ್ ನಲ್ಲಿ ಸಿದ್ಧತೆ ಆರಂಭಿಸಿದ ಟೀಂ ಇಂಡಿಯಾ
Photo: instagram.com/jaspritb1
ಹೊಸದಿಲ್ಲಿ: ಪ್ರಸಕ್ತ ವರ್ಷದ ಐಸಿಸಿ ಟಿ20 ವಿಶ್ವಕಪ್ ಅಭಿಯಾನಕ್ಕೆ ಸಜ್ಜಾಗುತ್ತಿರುವ ಭಾರತ ತಂಡ ನ್ಯೂಯಾರ್ಕ್ ನಲ್ಲಿ ಕಠಿಣ ತಾಲೀಮು ಆರಂಭಿಸಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಜೂನ್ 2ರಿಂದ ಈ ಮೆಗಾ ಟೂರ್ನಿ ಆರಂಭವಾಗಲಿದೆ.
ರೋಹಿತ್ ಶರ್ಮಾ, ಜಸ್ ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೊಳಗೊಂಡ ತಂಡದ ಮೊದಲ ಬ್ಯಾಚ್ ಕೆಲ ದಿನಗಳ ಹಿಂದೆ ನ್ಯೂಯಾರ್ಕ್ ಗೆ ಆಗಮಿಸಿ ತರಬೇತಿ ಪಡೆಯುತ್ತಿದೆ. ಬೂಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್ ಪಟುಗಳು ಜಾಗಿಂಗ್ ಮಾಡುತ್ತಿರುವ ಹಾಗೂ ಬೂಮ್ರಾ ಮೈದಾನದಲ್ಲಿ ತರಬೇತಿ ಪಡೆಯುತ್ತಿರುವ ಚಿತ್ರಗಳು ಹರಿದಾಡುತ್ತಿವೆ. ಇಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಠಿಣ ಪ್ರಯತ್ನ ನಡೆಸುತ್ತಿದ್ದಾರೆ.
ನ್ಯೂಯಾರ್ಕ್ ನ ಮೊದಲ ತರಬೇತಿ ಚಿತ್ರವನ್ನು ಸೂರ್ಯಕುಮಾರ್ ಯಾದವ್ ಹಂಚಿಕೊಂಡಿದ್ದಾರೆ. ಮೆನ್ ಇನ್ ಬ್ಲೂ ತಂಡ ಬದ್ಧ ಎದುರಾಳಿ ಪಾಕಿಸ್ತಾನ, ಅತಿಥೇಯ ರಾಷ್ಟ್ರವಾದ ಅಮೆರಿಕ, ಐರ್ಲೆಂಡ್ ಮತ್ತು ಕೆನಡಾ ಜತೆಗೆ ಎ ಗುಂಪಿನಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಅಭಿಯಾನಕ್ಕೆ ನಾಂದಿ ಹಾಡಲಿದೆ. ಟೂರ್ನಿಗೆ ಮುನ್ನ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಟಿ20 ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರೆ, ಇಂಗ್ಲೆಂಡ್ ವಿಶ್ವಕಪ್ ಗೆದ್ದಿತ್ತು. ಭಾರತ ಎಂ.ಎಸ್.ಧೋನಿ ನಾಯಕತ್ವದಲ್ಲಿ 2007ರಲ್ಲಿ ಚುಟುಕು ಕ್ರಿಕೆಟ್ ನ ಏಕೈಕ ವಿಶ್ವಕಪ್ ಗೆದ್ದಿದೆ. ಜೊಹಾನ್ಸ್ ಬರ್ಗ್ ನಲ್ಲಿ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯ ಗೆದ್ದಿತ್ತು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.