ಟಿ20 ವಿಶ್ವಕಪ್: ಭಾರತ ತಂಡದಲ್ಲಿರುವ ಆಟಗಾರರ ಐಪಿಎಲ್ ಸಾಧನೆ ಏನು?
Photo:X/ T20WorldCup
ಹೊಸದಿಲ್ಲಿ: ಜೂನ್ 2ರಿಂದ ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 15 ಮಂದಿಯ ಪೈಕಿ ಒಂಬತ್ತು ಆಟಗಾರರು ಈ ಹಿಂದಿನ ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಂಡವರು. ಭಾರತ ತಂಡದಲ್ಲಿರುವ ಅಗ್ರಗಣ್ಯ ಆಟಗಾರರು ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.
ರೋಹಿತ್ ಶರ್ಮಾ ಐದು ಬಾರಿ ಚಾಂಪಿಯನ್ ಶಿಪ್ ಗೆದ್ದ ಮುಂಬೈ ಇಂಡಿಯನ್ ಪರ ಆಡುತ್ತಿದ್ದು, ಈ ಬಾರಿ 10 ಪಂದ್ಯಗಳಲ್ಲಿ 158.29 ಸ್ಟ್ರೈಕ್ ರೇಟ್ ನೊಂದಿಗೆ 315 ರನ್ ಬಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 105 ರನ್ ಗಳಿಸಿರುವುದು ಈ ಬಾರಿಯ ಗರಿಷ್ಠ ಸಾಧನೆ. ಅದೇ ತಂಡದ ವಿವಾದಾತ್ಮಕ ನಾಯಕ ಹಾರ್ದಿಕ್ ಪಾಂಡ್ಯ 10 ಪಂದ್ಯಗಳಲ್ಲಿ 10 ಸಿಕ್ಸರ್ ಒಳಗೊಂಡಂತೆ 197 ರನ್ ಗಳಿಸಿದ್ದಾರೆ. 11.95 ಸರಾಸರಿಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್, ಮುಂಬೈ ಇಂಡಿಯನ್ಸ್ ವಿರುದ್ಧ 59 ಎಸೆತಗಳಲ್ಲಿ ಶತಕ ಸಾಧಿಸುವ ಮೂಲಕ ಕಳಪೆ ಪ್ರದರ್ಶನದಿಂದ ಹೊರಬಂದಿದ್ದಾರೆ. ವಿರಾಟ್ ಕೊಹ್ಲಿಯವರ ರನ್ ರೇಟ್ ಬಗ್ಗೆ ಚರ್ಚೆಗಳು ನಡೆಯುತ್ತಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ 10 ಪಂದ್ಯಗಳಲ್ಲಿ 150 ಸ್ಟ್ರೈಕ್ ರೇಟ್ ನೊಂದಿಗೆ 500 ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ 78 ರನ್ ಗಳನ್ನು ಸಿಡಿಸಿ ಶಸ್ತ್ರಚಿಕಿತ್ಸೆ ಬಳಿಕ ಭರ್ಜರಿ ಪುನರಾಗಮನ ಸಾರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಂಡಿರುವ ರಿಷಭ್ ಪಂತ್ 10 ಪಂದ್ಯಗಳಲ್ಲಿ 160.60 ಸ್ಟ್ರೈಕ್ ರೇಟ್ ನೊಂದಿಗೆ 371 ರನ್ ಕಲೆ ಹಾಕಿದ್ದಾರೆ. ಉಳಿದಂತೆ ಸಂಜು ಸ್ಯಾಮ್ಸನ್ (385), ಶಿವಂ ದುಬೆ (350), ರವೀಂದ್ರ ಜಡೇಜಾ (157), ಅಕ್ಷರ್ ಪಟೇಲ್ (150) ಅವರು ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಒಂಬತ್ತು ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿರುವ ಕುಲದೀಪ್ ಯಾದವ್, 13 ವಿಕೆಟ್ ಕಿತ್ತಿರುವ ಯಜುವೇಂದ್ರ ಚಾಹಲ್, ಅರ್ಷದೀಪ್ ಸಿಂಗ್ (12), ಜಸ್ಪ್ರೀತ್ ಬೂಮ್ರಾ (14), ಮೊಹ್ಮದ್ ಸಿರಾಜ್ (6) ಕೂಡಾ ತಂಡದಲ್ಲಿದ್ದಾರೆ.