ಟೇಬಲ್ ಟೆನಿಸ್: ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಭಾರತದ ಪುರುಷರ ತಂಡ
Photo:twitter/UltTableTennis
ಹಾಂಗ್ಝೌ: ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡ ಏಶ್ಯನ್ ಗೇಮ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋಲುವ ಮೂಲಕ ಕಂಚಿನ ಪದಕದಿಂದ ವಂಚಿತವಾಗಿದೆ. ಕಠಿಣ ಸ್ಪರ್ಧೆಯ ನಂತರ ಮಹಿಳಾ ತಂಡ ಸ್ಫರ್ಧೆಯಿಂದ ಹೊರಗುಳಿದಿದೆ.
ರವಿವಾರ ನಡೆದ ಅಂತಿಮ-8ರ ಪಂದ್ಯದಲ್ಲಿ ಭಾರತವು 0-3 ಅಂತರದಿಂದ ಸೋಲುಂಡಿದೆ. ಹರ್ಮೀತ್ ದೇಸಾಯಿ ಮೊದಲ ಸಿಂಗಲ್ಸ್ ಪಂದ್ಯವನ್ನು 0-3 ಅಂತರದಿಂದ ಸೋತಿದ್ದಾರೆ. 2ನೇ ಪಂದ್ಯದಲ್ಲಿ ಜಿ. ಸತ್ಯನ್ಹೋರಾಟ ನೀಡಲು ಯತ್ನಿಸಿದರು. ಆದರೆ ಇದು ಗೆಲುವಿಗೆ ಸಾಕಾಗದ ಕಾರಣ ಭಾರತವು ಮೊದಲೆರಡು ಪಂದ್ಯಗಳ ನಂತರ 0-2 ಹಿನ್ನಡೆ ಕಂಡಿತು. ಚೆನ್ನೈ ಆಟಗಾರ ಅಚಂತ ಶರತ್ ಕಮಲ್ 2-3 ಅಂತರದಿಂದ ಸೋಲುವ ಮೂಲಕ ಭಾರತವು ಪದಕದಿಂದ ವಂಚಿತವಾಯಿತು. ದಕ್ಷಿಣ ಕೊರಿಯಾದ ಅಗ್ರ ಮೂವರು ಆಟಗಾರರು ಪಂದ್ಯದಲ್ಲಿ ಆಡದೇ ಇದ್ದರೂ ಭಾರತ ಸೋತಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ.
ಇದಕ್ಕೂ ಮೊದಲು ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಭಾರತೀಯ ಟಿಟಿ ತಂಡ ಪುರುಷರ ಟೀಮ್ ಇವೆಂಟ್ನಲ್ಲಿ ಕಝಕಿಸ್ತಾನವನ್ನು ಮಣಿಸಿತು. ಪಂದ್ಯವು 2-2ರಿಂದ ಸಮಬಲಗೊಂಡಿದ್ದಾಗ ಹಿರಿಯ ಟಿಟಿ ಆಟಗಾರ ಅಚಂತ ಶರತ್ ಕಮಲ್ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ 1-3 ಅಂತರದಿಂದ ಸೋತಿದ್ದ ಶರತ್ ಕಮಲ್ ರಿವರ್ಸ್ ಸಿಂಗಲ್ಸ್ನಲ್ಲಿ ಜಯ ಸಾಧಿಸಿದರು.
ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಭಾರತವು ಥಾಯ್ಲೆಂಡ್ನಿಂದ ಕಠಿಣ ಸವಾಲು ಎದುರಿಸಿದ್ದು, 2-3 ಅಂತರದಿಂದ ಸೋಲನುಭವಿಸಿತು. ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಪರದಾಟ ನಡೆಸಿದರು.