ಬಾಂಗ್ಲಾ ಪ್ರಧಾನಿ ಭೇಟಿ ನಂತರ ನಿವೃತ್ತಿ ನಿರ್ಧಾರ ವಾಪಸ್ ಪಡೆದ ತಮೀಮ್ ಇಕ್ಬಾಲ್

ತಮೀಮ್ ಇಕ್ಬಾಲ್, ಫೋಟೋ: PTI
ಢಾಕಾ, ಜು.7: ನಾಟಕೀಯ ತಿರುವಿನಲ್ಲಿ ಹಿರಿಯ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್ ಶುಕ್ರವಾರ ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸಿನಾರನ್ನು ಭೇಟಿಯಾದ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ತನ್ನ ನಿರ್ಧಾರವನ್ನು ಹಿಂಪಡೆದಿದ್ದಾರೆ. ಬಾಂಗ್ಲಾ ಪ್ರಧಾನಿ ಅವರು ಇಕ್ಬಾಲ್ ನಿವೃತ್ತಿಯ ವಿಚಾರದಲ್ಲಿ ಮಧ್ಯಪ್ರವೇಶಿಸಿದರು ಎಂದು ವರದಿಯಾಗಿದೆ.
ಪ್ರಧಾನಿ ಹಸಿನಾರ ಆಹ್ವಾನದ ಮೇರೆಗೆ ತಮೀಮ್ ಶುಕ್ರವಾರ ಮಧ್ಯಾಹ್ನ ಅವರನ್ನು ಭೇಟಿಯಾಗಿದ್ದರು.
ಇದಕ್ಕೂ ಮೊದಲು ಲಿಟನ್ ದಾಸ್ರನ್ನು ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ನಾಯಕರನ್ನಾಗಿ ನೇಮಿಸಲಾಗಿತ್ತು.
ಮಳೆ ಬಾಧಿತ ಮೊದಲ ಏಕದಿನ ಪಂದ್ಯ ನಡೆದ ಮರುದಿನ ಗುರುವಾರ ಸುದ್ದಿಗೋಷ್ಠಿ ನಡೆಸಿರುವ ತಮೀಮ್ ಕಣ್ಣೀರಿಡುತ್ತಾ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ತಕ್ಷಣವೇ ವಿದಾಯ ಹೇಳುತ್ತಿರುವುದಾಗಿ ಪ್ರಕಟಿಸಿದ್ದರು.
ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲು ಇನ್ನು 3 ತಿಂಗಳು ಬಾಕಿ ಇರುವಾಗ ಅವರ ಈ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಬಾಂಗ್ಲಾದೇಶವು ಧರ್ಮಶಾಲಾದಲ್ಲಿ ಅಕ್ಟೋಬರ್ 7ರಂದು ಅಫ್ಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಎಡಗೈ ಆರಂಭಿಕ ಆಟಗಾರ ತಮೀಮ್ ಇಂಟರ್ನ್ಯಾಶನಲ್ ಕ್ರಿಕೆಟ್ನಲ್ಲಿ 25 ಶತಕಗಳ ಸಹಿತ ಒಟ್ಟು 15,000ಕ್ಕೂ ಅಧಿಕ ರನ್ ಕಲೆಹಾಕಿದ್ದರು. ಏಕದಿನ ಕ್ರಿಕೆಟ್ನಲ್ಲಿ 14 ಶತಕಗಳ ಸಹಿತ 8,313 ರನ್ ಗಳಿಸಿದ್ದು, ಬಾಂಗ್ಲಾ ಪರ ಗರಿಷ್ಠ ಏಕದಿನ ರನ್ ಗಳಿಸಿದ ಆಟಗಾರನಾಗಿದ್ದಾರೆ.