ರಾಜಸ್ಥಾನ ರಾಯಲ್ಸ್ ಗೆ ತನುಷ್ ಕೋಟ್ಯಾನ್ ಸೇರ್ಪಡೆ
ಗುಜರಾತ್ ಟೈಟಾನ್ಸ್ ಗೆ ಕನ್ನಡಿಗ ಬಿ.ಆರ್. ಶರತ್
ತನುಷ್ ಕೋಟ್ಯಾನ್ | Photo : PTI
ಹೊಸದಿಲ್ಲಿ: ಇತ್ತೀಚೆಗೆ ಮುಂಬೈ ತಂಡ ದಾಖಲೆಯ 42ನೇ ರಣಜಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಆಲ್ರೌಂಡರ್ ತನುಷ್ ಕೋಟ್ಯಾನ್ ಆಸ್ಟ್ರೇಲಿಯದ ಆಟಗಾರ ಆಡಮ್ ಝಂಪಾ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ತನುಷ್ ಕೋಟ್ಯಾನ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ ಮೂಲ ಬೆಲೆ 20 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ ಎಂದು ಐಪಿಎಲ್ ಮೂಲಗಳು ಶುಕ್ರವಾರ ತಿಳಿಸಿವೆ.
ಈ ಹಿಂದಿನ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ 6 ಪಂದ್ಯಗಳಲ್ಲಿ 8 ವಿಕೆಟ್ ಗಳನ್ನು ಉರುಳಿಸಿದ್ದ ಆಸ್ಟ್ರೇಲಿಯದ ಆಫ್ ಸ್ಪಿನ್ನರ್ ಆಡಮ್ ಝಂಪಾರನ್ನು ರಾಯಲ್ಸ್ ತಂಡ 1.5 ಕೋ.ರೂ.ಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಆದರೆ ಜೂನ್ ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಗಿಂತ ಮೊದಲು ಭಾರೀ ಒತ್ತಡವನ್ನು ಉಲ್ಲೇಖಿಸಿ ಝಂಪಾ ಈ ವರ್ಷದ ಐಪಿಎಲ್ ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಆಫ್ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಕೂಡ ಆಗಿರುವ ತನುಷ್ ಕೋಟ್ಯಾನ್ ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಕಾರಣ 2023ರಲ್ಲಿ ಐಪಿಎಲ್ ಗುತ್ತಿಗೆ ಪಡೆಯುವ ನಿರೀಕ್ಷೆ ಇತ್ತು. ಆದರೆ ಅವರ ಬೌಲಿಂಗ್ ಶೈಲಿಯ ಕುರಿತು ಶಂಕೆ ವ್ಯಕ್ತಪಡಿಸಲಾಗಿತ್ತು.
ಆದರೆ 25ರ ಹರೆಯದ ಕೋಟ್ಯಾನ್ ಈ ವರ್ಷದ ರಣಜಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಿದ್ದು 502 ರನ್ ಹಾಗೂ 29 ವಿಕೆಟ್ ಗಳನ್ನು ಪಡೆದು ಸರಣಿಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ಮುಂಬೈ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಸಾಮಾನ್ಯವಾಗಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕೋಟ್ಯಾನ್ ಬರೋಡಾ ವಿರುದ್ಧ ರಣಜಿ ಕ್ವಾರ್ಟರ್ ಫೈನಲ್ ನಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಔಟಾಗದೆ 120 ರನ್ ಹಾಗೂ ತಮಿಳುನಾಡು ವಿರುದ್ಧ ಸೆಮಿ ಫೈನಲ್ ನಲ್ಲಿ ಔಟಾಗದೆ 89 ರನ್ ಗಳಿಸಿದ್ದರು.
ಗುಜರಾತ್ ಟೈಟಾನ್ಸ್ ಗೆ ಶರತ್:
ರಾಬಿನ್ ಮಿಂಝ್ ಬದಲಿಗೆ ಕರ್ನಾಟಕದ ವಿಕೆಟ್ಕೀಪರ್-ಬ್ಯಾಟರ್ ಬಿ.ಆರ್. ಶರತ್ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಲಿದ್ದಾರೆ ಎಂದು ಐಪಿಎಲ್ ಸಂಘಟಕರು ಘೋಷಿಸಿದ್ದಾರೆ.
ಜಾರ್ಖಂಡ್ ನ ಮಿಂಝ್ ಇತ್ತೀಚೆಗೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು.
ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಶರತ್ ಈ ತನಕ 28 ಟಿ-20 ಪಂದ್ಯಗಳಲ್ಲದೆ 20 ಪ್ರಥಮ ದರ್ಜೆ ಪಂದ್ಯಗಳು ಹಾಗೂ 43 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 328 ಟಿ-20 ರನ್ ಕೂಡ ಗಳಿಸಿದ್ದಾರೆ.
ಶರತ್ ಮೂಲ ಬೆಲೆ 20 ಲಕ್ಷ ರೂ.ಗೆ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಲಿದ್ದಾರೆ.