ಮುಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ತಂಡ ಜಾಗರೂಕವಾಗಿದೆ: ರೋಹಿತ್ ಶರ್ಮಾ
ರೋಹಿತ್ ಶರ್ಮಾ , ಮುಹಮ್ಮದ್ ಶಮಿ | PC : PTI
ಹೊಸದಿಲ್ಲಿ, ಡಿ.10: ಆಸ್ಟ್ರೇಲಿಯ ತಂಡದ ವಿರುದ್ಧ ಪರ್ತ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದ ನಂತರ ಭಾರತೀಯ ಕ್ರಿಕೆಟ್ ತಂಡವು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿತ್ತು. ಜಸ್ಪ್ರಿತ್ ಬುಮ್ರಾ ತನ್ನ ಶ್ರೇಷ್ಠ ಪ್ರದರ್ಶನ ನೀಡಿದರೆ, ಮುಹಮ್ಮದ್ ಸಿರಾಜ್ ತನ್ನ ಮೊದಲಿನ ಲಯ ಕಂಡುಕೊಂಡಿದ್ದರು. ಹರ್ಷಿತ್ ರಾಣಾ ಕೂಡ ತನ್ನ ಚೊಚ್ಚಲ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದರು.
ಅಡಿಲೇಡ್ನಲ್ಲಿ ನಡೆದ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಚೆಂಡಿನ ಬದಲಿಗೆ ಗುಲಾಬಿ ಬಣ್ಣದ ಚೆಂಡನು ಬಳಸಿದಾಗ ಪರಿಸ್ಥಿತಿ ಕೂಡ ಬದಲಾಯಿತು. ಭಾರತವು 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಆಡಿರುವ ಬೌಲಿಂಗ್ ಪಡೆಯನ್ನೇ ಕಣಕ್ಕಿಳಿಸಿತು. ಆದರೆ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಬುಮ್ರಾ ಅವರು ಕೆಲಸದ ಒತ್ತಡದಲ್ಲಿದ್ದಂತೆ ಕಂಡುಬಂದರು.
ಅಡಿಲೇಡ್ ಪಂದ್ಯದಲ್ಲಿ ಬುಮ್ರಾಗೆ ಸರಿಯಾದ ಬೆಂಬಲ ಸಿಗಲಿಲ್ಲ. ಆಗ ಮುಹಮ್ಮದ್ ಶಮಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ರಾಜ್ಯ ಬಂಗಾಳ ತಂಡವನ್ನು ಪ್ರತಿನಿಧಿಸಿರುವ ಶಮಿ ಅವರು ನ್ಯಾಶನಲ್ ಕ್ರಿಕೆಟ್ ಅಕಾಡಮಿಯ ಸ್ಪೆಷಲಿಸ್ಟ್ಗಳ ಹದ್ದಿನ ಕಣ್ಣಿನಡಿ ತನ್ನ ಫಿಟ್ನೆಸ್ ಸಾಬೀತುಪಡಿಸಿದರು.
ಅಡಿಲೇಡ್ ಟೆಸ್ಟ್ ಪಂದ್ಯದ ನಂತರ ವರದಿಗಾರರು ಶಮಿ ಅವರ ಲಭ್ಯತೆ ಕುರಿತಂತೆ ನಾಯಕ ರೋಹಿತ್ರಲ್ಲಿ ವಿಚಾರಿಸಿದಾಗ, ಅನುಭವಿ ವೇಗದ ಬೌಲರ್ಗೆ ಬಾಗಿಲು ಸದಾ ಕಾಲ ತೆರೆದಿರುತ್ತದೆ. ಆದರೆ, ಶಮಿ ಅವರ ದೈಹಿಕ ಕ್ಷಮತೆಯ ಬಗ್ಗೆ ತಂಡವು ಜಾಗರೂಕವಾಗಿದೆ ಎಂದು ಒತ್ತಿ ಹೇಳಿದರು.
ನಾವು ಅವರ ಮೇಲೆ ನಿಗಾವಹಿಸಿದ್ದೇವೆ. ಏಕೆಂದರೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವಾಗ ಅವರ ಮೊಣಕಾಲಿನಲ್ಲಿ ಸ್ವಲ್ಪ ಊತ ಕಂಡುಬಂದಿತ್ತು. ಇದು ಟೆಸ್ಟ್ ಪಂದ್ಯವನ್ನು ಆಡುವ ನಿಟ್ಟಿನಲ್ಲಿ ಅವರ ಸಿದ್ಧತೆಗೆ ಅಡ್ಡಿಯಾಗಿದೆ. ನಾವು ಶಮಿ ಅವರ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಲು ಬಯಸುತ್ತೇವೆ. ನಾವು ಅವರನ್ನು ಇಲ್ಲಿಗೆ ಕರೆ ತರಲು ಬಯಸುವುದಿಲ್ಲ, ಅವರು ಶೇ.100ರಷ್ಟು ಹೆಚ್ಚು ಫಿಟ್ನೆಸ್ ಇರುವುದನ್ನು ಬಯಸುತ್ತೇವೆ ಎಂದು ರೋಹಿತ್ ಹೇಳಿದ್ದಾರೆ.
*ಮೊಣಕಾಲು ಊತದಿಂದ ಬಳಲುತ್ತಿರುವ ಶಮಿ
ಶಮಿ ಅವರು 2023ರಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿದ ನಂತರ ಭಾರತ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ವರ್ಷದ ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಕಾರಣವಾದ ಗಾಯದ ಸಮಸ್ಯೆಯಿಂದಾಗಿ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿರುವ ಶಮಿ ಅವರು ಇಂದೋರ್ನಲ್ಲಿ ಮಧ್ಯಪ್ರದೇಶದ ವಿರುದ್ಧ 7 ವಿಕೆಟ್ಗಳನ್ನು ಉರುಳಿಸಿದ್ದರು.
ಆ ನಂತರ ಶಮಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ಎಲ್ಲ ಗ್ರೂಪ್ ಪಂದ್ಯಗಳನ್ನು ಆಡಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಚಂಡಿಗಡ ವಿರುದ್ಧ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಆಡಿದ್ದರು. ಆಸ್ಟ್ರೇಲಿಯ ವಿರುದ್ಧ ಸರಣಿಯ ವೇಳೆ ಶಮಿ ಭಾರತ ತಂಡವನ್ನು ಸೇರಿಕೊಳ್ಳುವ ವಿಶ್ವಾಸವಿತ್ತು. ಆದರೆ ಮೊಣಕಾಲಿನಲ್ಲಿ ಕಾಣಿಸಿಕೊಂಡಿರುವ ಊತವು ಅವರ ಪುನರಾಗಮನವನ್ನು ವಿಳಂಬವಾಗಿಸಿದೆ.
ಶಮಿ ಅವರನ್ನು ಅಲ್ಪಾವಧಿಗೆ ಆಸ್ಟ್ರೇಲಿಯಕ್ಕೆ ಕರೆ ತರುವುದು ಕಳಪೆ ನಿರ್ಧಾರವಾಗಲಿದೆ ಎಂದು ರೋಹಿತ್ ಅವರು ರವಿವಾರ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಯು ಇದೀಗ ಶಮಿ ಅವರ ಫಿಟ್ನೆಸ್ ಅನ್ನು ನಿಕಟವಾಗಿ ಗಮನಿಸುತ್ತಿದೆ.
ಆಯ್ಕೆ ಸಮಿತಿಯ ಎಸ್.ಎಸ್. ದಾಸ್ ಹಾಗೂ ನಿತಿನ್ ಪಟೇಲ್ ನೇತೃತ್ವದ ಎನ್ಸಿಎ ತಂಡವು ಶಮಿ ಅವರು ಟೆಸ್ಟ್ ಕ್ರಿಕೆಟ್ನ ಬೇಡಿಕೆಗಳನ್ನು ಈಡೇರಿಸಬಹುದೇ ಎಂದು ನಿರ್ಣಯಿಸುತ್ತಿದ್ದಾರೆ.
ಸಂಪೂರ್ಣ ಫಿಟ್ ಎಂದರೆ ಘೋಷಿಸಿದರೆ, ಶಮಿ ಮರಳಿಕೆಯು ಭಾರತದ ಅಭಿಯಾನಕ್ಕೆ ಮಹತ್ವದ ಉತ್ತೇಜನ ನೀಡಲಿದೆ.
*ಜಸ್ಪ್ರಿತ್ ಬುಮ್ರಾಗೆ ಬೇಕಾಗಿದೆ ಸಹ ಬೌಲರ್ಗಳ ಬೆಂಬಲ
ಅಡಿಲೇಡ್ ಟೆಸ್ಟ್ನ ಎರಡನೇ ದಿನದಾಟದಲ್ಲಿ ಜಸ್ಪ್ರಿತ್ ಬುಮ್ರಾ ಗಾಯದ ಭೀತಿಗೆ ಒಳಗಾಗುವ ಮೂಲಕ ಟೀಮ್ ಇಂಡಿಯಾವು ಆತಂಕಕ್ಕೆ ಒಳಗಾಗಿತ್ತು. ಮಂಡಿರಜ್ಜಿನಲ್ಲಿ ನೋವು ಕಾಣಿಸಿಕೊಂಡ ನಂತರ ಬುಮ್ರಾ ವೈದ್ಯಕೀಯ ಆರೈಕೆ ಪಡೆದರು. ಆನಂತರ ಚೇತರಿಸಿಕೊಂಡು ಬೌಲಿಂಗ್ ಮುಂದುವರಿಸಿದ್ದರು. ಬುಮ್ರಾ ಅವರು ಮಂಗಳವಾರ ಅಡಿಲೇಡ್ನಲ್ಲಿ ಅಭ್ಯಾಸದಲ್ಲಿ ಭಾಗಿಯಾಗಲಿಲ್ಲ. ಬುಮ್ರಾ ಅವರ ಬೌಲಿಂಗ್ ಒತ್ತಡವನ್ನು ಕಡಿಮೆ ಮಾಡಿದ್ದ ಮುಹಮ್ಮದ್ ಸಿರಾಜ್ ಕೂಡ ಮಂಗಳವಾರ ನೆಟ್ ಪ್ರಾಕ್ಟೀಸ್ನಿಂದ ದೂರ ಉಳಿದಿದ್ದರು. 2ನೇ ಟೆಸ್ಟ್ ವೇಳೆ ಬುಮ್ರಾಗೆ ನೋವು ಕಾಣಿಸಿಕೊಂಡಿರುವುದು ಬೌಲಿಂಗ್ ದಾಳಿಯ ಮೇಲೆ ಇನ್ನಷ್ಟು ಒತ್ತಡ ವುಂಟು ಮಾಡಿದೆ.
ಶಮಿ ಅವರ ಅನುಪಸ್ಥಿತಿಯಲ್ಲಿ ಬುಮ್ರಾ ಅವರು ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದರು. ಬುಮ್ರಾಗೆ ಮುಹಮ್ಮದ್ ಸಿರಾಜ್ ಹಾಗೂ ಅನನುಭವಿ ಜೋಡಿಯಾದ ಹರ್ಷಿತ್ ರಾಣಾ ಹಾಗೂ ನಿತೀಶ್ ಕುಮಾರ್ ರೆಡ್ಡ್ಡಿ ಸಾಥ್ ನೀಡಿದ್ದರು.
ಪರ್ತ್ ಟೆಸ್ಟ್ನಲ್ಲಿ ಬುಮ್ರಾ ಅವರ ಪ್ರಯತ್ನಕ್ಕೆ ಸಿರಾಜ್ ಸ್ಥಿರ ಪ್ರದರ್ಶನದ ಮೂಲಕ ಸಾಥ್ ನೀಡಿದ್ದರು. ರಾಣಾ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದರು. ಆಸ್ಟ್ರೇಲಿಯದ ವಾತಾವರಣಕ್ಕೆ ಹೊಂದಿಕೊಂಡಿರುವ ರಾಣಾ ಅವರು ಮೊದಲ ಇನಿಂಗ್ಸ್ನಲ್ಲಿ 3 ನಿರ್ಣಾಯಕ ವಿಕೆಟ್ಗಳು ಹಾಗೂ 2ನೇ ಇನಿಂಗ್ಸ್ನಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದರು.
2ನೇ ಟೆಸ್ಟ್ಗಿಂತ ಮೊದಲು ಕ್ಯಾನ್ಬೆರಾದಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ರಾಣಾ ಅವರು 4 ವಿಕೆಟ್ಗಳನ್ನು ಉರುಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರು. ಆದರೆ ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪರದಾಟ ನಡೆಸಿದ್ದ ರಾಣಾ ಅವರು 16 ಓವರ್ಗಳಲ್ಲಿ 5.37ರ ಇಕಾನಮಿ ರೇಟ್ನಲ್ಲಿ ಒಂದೂ ವಿಕೆಟ್ ಪಡೆಯದೆ 86 ರನ್ ನೀಡಿದ್ದರು.
ಡಿ.14ರಿಂದ ಬ್ರಿಸ್ಬೇನ್ನಲ್ಲಿ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಎಲ್ಲರ ಚಿತ್ತವು ಬುಮ್ರಾ ಫಿಟ್ನೆಸ್ ಮೇಲೆ ನೆಟ್ಟಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಬೌಲಿಂಗ್ ದಾಳಿಯನ್ನು ರೋಹಿತ್ ಹೇಗೆ ನಿಭಾಯಿಸುತ್ತಾರೆಂಬ ಕುತೂಹಲ ಎಲ್ಲರಲ್ಲಿದೆ.
*ಮುಕೇಶ್ ಕುಮಾರ್ಗೆ ಅವಕಾಶ ಸಾಧ್ಯತೆ
ಮುಕೇಶ್ ಕುಮಾರ್ ಅವರು ಭಾರತದ ಮೀಸಲು ಆಟಗಾರನಾಗಿ ತಂಡದೊಂದಿಗೆ ಪ್ರಯಾಣಿಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ಇಂಡೀಸ್ ವಾತಾವರಣದಲ್ಲಿ ಆಡಿರುವ ಅನುಭವ ಹೊಂದಿರುವ ಮುಕೇಶ್ಗೆ ಅವಶ್ಯವಿದ್ದರೆ ಪ್ರಮುಖ ಪಾತ್ರವಹಿಸಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ತಂಡದ ಭಾಗವಾಗಿದ್ದ ಮುಕೇಶ್ ಅವರು ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ದೇಶೀಯ ಹಾಗೂ ಎ ತಂಡಗಳ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
2023ರಲ್ಲಿ ವೆಸ್ಟ್ಇಂಡೀಸ್ ವಿರುದ್ದ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಶಮಿ ಅವರು ಎಲ್ಲ 3 ಪಂದ್ಯಗಳಲ್ಲಿ 7 ವಿಕೆಟ್ಗಳನ್ನು ಪಡೆದಿದ್ದರು.
ಒಂದು ವೇಳೆ ಬುಮ್ರಾ ಅಲಭ್ಯರಾದರೆ ಅಥವಾ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಂಡರೆ, ರೋಹಿತ್ ಅವರು ಸರಣಿಯ ವೇಳೆ ಮುಕೇಶ್ರತ್ತ ಚಿತ್ತ ಹರಿಸಬಹುದು.