ಜ.18ರಂದು ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಆಯ್ಕೆ?

ಟೀಮ್ ಇಂಡಿಯಾ | PC : PTI
ಮುಂಬೈ: ದುಬೈ ಹಾಗೂ ಪಾಕಿಸ್ತಾನದಲ್ಲಿ ಫೆಬ್ರವರಿ 19ರಿಂದ ಆರಂಭವಾಗಲಿರುವ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹಾಗೂ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಶನಿವಾರ ಆಯ್ಕೆ ಮಾಡುವ ಸಾಧ್ಯತೆಯಿದೆ.
ಜಾಗತಿಕ ಟೂರ್ನಮೆಂಟ್ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ ನಂತರ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ವಾಂಖೆಡೆ ಕ್ರೀಡಾಂಗಣದ ಬಿಸಿಸಿಐ ಮುಖ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಿಡ್ನಿಯಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವುದಕ್ಕೆ ಅಡ್ಡಿಯಾದ ಬೆನ್ನುನೋವಿನಿಂದ ಬಳಲುತ್ತಿರುವ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ.
ಭಾರತ ತಂಡವು ತನ್ನೆಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೆ.20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.ಫೆ.23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ ತಂಡವು ಮಾರ್ಚ್ 2ರಂದು ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಮುಖಾಮುಖಿಯಾಗಲಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳು ಫೆ.6,9 ಹಾಗೂ 12ರಂದು ನಿಗದಿಯಾಗಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವು ಫೈನಲ್ಗೆ ತಲುಪುವಲ್ಲಿ ನಾಯಕತ್ವವಹಿಸಿದ್ದ ರೋಹಿತ್ ಶರ್ಮಾ ಸದ್ಯ ಕಳಪೆ ಫಾರ್ಮ್ನಲ್ಲಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ತಂಡದ ನಾಯಕತ್ವ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ ವಿದರ್ಭದ ಪರವಾಗಿ ಸತತ 4 ಶತಕಗಳ ಸಹಿತ 752ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 752 ರನ್ ಗಳಿಸಿರುವ ಹಿರಿಯ ಬ್ಯಾಟರ್ ಕರುಣ್ ನಾಯರ್ ಆಯ್ಕೆ ಸಮಿತಿಯ ಗಮನ ಸೆಳೆಯುತ್ತಾರೆಯೇ ಎಂದು ನೋಡಬೇಕಾಗಿದೆ.
ಬಿಸಿಸಿಐ ಹಾಗೂ ಆಯ್ಕೆದಾರರು ಇತ್ತೀಚೆಗೆ ದೇಶೀಯ ಕ್ರಿಕೆಟ್ನ ಮಹತ್ವವನ್ನು ಒತ್ತಿ ಹೇಳುತ್ತಿದ್ದರೂ ಏಕದಿನ ಕ್ರಿಕೆಟ್ ತಂಡದಲ್ಲಿ ನಾಯರ್ಗೆ ಸ್ಥಾನ ಒದಗಿಸುವುದು ಸುಲಭವಲ್ಲ.
15 ಸದಸ್ಯರ ತಂಡದಲ್ಲಿ ಕರುಣ್ಗೆ ಸ್ಥಾನ ನೀಡಲು ಯಾವ ಆಟಗಾರನನ್ನು ಕೈಬಿಡಬೇಕೆಂಬ ಬಗ್ಗೆ ಗೊಂದಲವಿದೆ. ಶ್ರೇಯಸ್ ಅಯ್ಯರ್ರಂತಹ ಆಟಗಾರ 2023ರ ಏಕದಿನ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಶತಕ ಗಳಿಸಿದ್ದರು. ದೇಶಿ ಕ್ರಿಕೆಟ್ನ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಪ್ರಸಕ್ತ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆದರೆ, ಕರುಣ್ ಕುರಿತಾಗಿ ತೀವ್ರ ಚರ್ಚೆ ನಡೆಯುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.