ನಾಳೆ ಮೂರನೇ ಏಕದಿನ ಪಂದ್ಯ | ಕ್ಲೀನ್ಸ್ವೀಪ್ ಸಾಧಿಸುವತ್ತ ಭಾರತ ತಂಡದ ಚಿತ್ತ

ವಿರಾಟ್ ಕೊಹ್ಲಿ | PTI
ಹೊಸದಿಲ್ಲಿ: ಅಹ್ಮದಾಬಾದ್ನಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಆಡಲಿರುವ ಟೀಮ್ ಇಂಡಿಯಾವು ಕ್ಲೀನ್ಸ್ವೀಪ್ ಸಾಧಿಸುವತ್ತ ಚಿತ್ತ ಹರಿಸಿದೆ. ಮತ್ತೊಂದೆಡೆ ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸುವ ಆಶಾವಾದದಲ್ಲಿದೆ.
ಭಾರತ ತಂಡವು ಸರಣಿಯ ಮೊದಲೆರಡು ಪಂದ್ಯಗಳನ್ನು 4 ವಿಕೆಟ್ಗಳ ಅಂತರದಿಂದ ಜಯಿಸಿ 2-0 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿದೆ. 2023ರ ವಿಶ್ವಕಪ್ ಫೈನಲ್ ಪಂದ್ಯವನ್ನು ಸೋತಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಬಳಗ ಮೂರನೇ ಏಕದಿನ ಪಂದ್ಯವನ್ನು ಜಯಿಸಿ 3-0 ಅಂತರದಿಂದ ಸರಣಿ ಗೆಲ್ಲುವತ್ತ ಗಮನಹರಿಸಿದೆ.
‘ಬ್ಯಾಟಿಂಗ್ ಮಾಂತ್ರಿಕ’ ಕೊಹ್ಲಿ ರನ್ ಗಳಿಸುವ ಮೂಲಕ ಭಾರತವು ಈ ಪಂದ್ಯವನ್ನು ಜಯಿಸಿದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಆತಿಥೇಯ ತಂಡವು ಉತ್ತಮ ತಯಾರಿ ನಡೆಸಲು ಸಾಧ್ಯವಾಗುತ್ತದೆ.
ಕರಾಚಿಯಲ್ಲಿ ಫೆ.19ರಿಂದ ಆರಂಭವಾಗಲಿರುವ 8 ತಂಡಗಳು ಭಾಗವಹಿಸಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೈಬ್ರಿಡ್ ಮಾದರಿಯ ಪ್ರಕಾರ ಭಾರತವು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ರೋಹಿತ್ ಶರ್ಮಾ 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಫಾರ್ಮ್ಗೆ ಮರಳಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ದೀರ್ಘ ಸಮಯದಿಂದ ರನ್ ಗಳಿಸಲು ಪರದಾಡುತ್ತಿದ್ದ ರೋಹಿತ್, ಕಟಕ್ ಏಕದಿನ ಪಂದ್ಯದಲ್ಲಿ 90 ಎಸೆತಗಳಲ್ಲಿ 119 ರನ್ ಗಳಿಸಿ ಸ್ವತಃ ತಾವು ಹಾಗೂ ತಂಡ ನಿಟ್ಟುಸಿರುಬಿಡುವಂತೆ ಮಾಡಿದರು.
ಒಂದು ವೇಳೆ ಕೊಹ್ಲಿ 3ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಕ್ಲಿಕ್ ಆದರೆ, ಮತ್ತೊಂದು ದಾಖಲೆ ನಿರ್ಮಿಸುವ ಅವಕಾಶ ಇರುತ್ತದೆ. ‘ರನ್ ಯಂತ್ರ' ಖ್ಯಾತಿಯ ಕೊಹ್ಲಿ ತನ್ನ ನೆಚ್ಚಿನ ಏಕದಿನ ಮಾದರಿ ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಪೂರೈಸಿದ ಮೂರನೇ ಬ್ಯಾಟರ್ ಎನಿಸಿಕೊಳ್ಳಲು ಕೇವಲ 89 ರನ್ ಅಗತ್ಯವಿದೆ.
ತನ್ನ ಪ್ರತಿಭಾವಂತ ಆಟಗಾರರ ದಂಡನ್ನು ಚೆನ್ನಾಗಿ ಬಳಸುತ್ತಾ ಬಂದಿರುವ ಭಾರತ ತಂಡವು ಸರಣಿಯಲ್ಲಿ ಯಾವುದೇ ತಪ್ಪೆಸಗಿಲ್ಲ. ಮುಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಪ್ರಸಕ್ತ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟಿಗೆ ಕಾಲಿಟ್ಟು ಸ್ಪಿನ್ ದಾಳಿ ಶಕ್ತಿಶಾಲಿಗೊಳಿಸಲು ಯತ್ನಿಸುತ್ತಿದ್ದಾರೆ. ಸ್ಪಿನ್ ವಿಭಾಗವನ್ನು ಬಲಿಷ್ಠಗೊಳಿಸುವುದು ಚಾಂಪಿಯನ್ಸ್ ಟ್ರೋಫಿಗೆ ಅತ್ಯಗತ್ಯವಾಗಿದೆ.
ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ತಮ್ಮ ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಾಗುವುದನ್ನು ಕುತೂಹಲದಿಂದ ಕಾಯುತ್ತಿದೆ. ಶಮಿ ಮರಳಿಕೆಯಿಂದಾಗಿ ತಂಡದಲ್ಲಿ ಹೊಸ ಶಕ್ತಿ ಬಂದಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಮೂಲ ವೇಳಾಪಟ್ಟಿಯ ಪ್ರಕಾರ ಅಹ್ಮದಾಬಾದ್ ಏಕದಿನ ಪಂದ್ಯಕ್ಕೆ ಬುಮ್ರಾ ಅವರು ತಂಡಕ್ಕೆ ಪುನರಾಗಮನ ಮಾಡಬೇಕಾಗಿತ್ತು. ಆದರೆ ಸ್ಟಾರ್ ವೇಗದ ಬೌಲರ್ ಬುಧವಾರ ಪ್ರಕಟವಾಗಲಿರುವ ಚಾಂಪಿಯನ್ಸ್ ಟ್ರೋಫಿಯ ಅಂತಿಮ ತಂಡದಲ್ಲಿ ಸ್ಥಾನ ಗಿಟ್ಟಿಸಲು ತಜ್ಞರ ಮೇಲ್ವಿಚಾರಣೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಕಠಿಣ ಶ್ರಮಪಡುತ್ತಿದ್ದಾರೆ.
ಮತ್ತೊಂದು ಐಸಿಸಿ ಚಾಂಪಿಯನ್ಶಿಪ್ ಗೆಲ್ಲುವತ್ತ ಗುರಿ ಇಟ್ಟಿರುವ ಭಾರತ ತಂಡದ ಪಾಲಿಗೆ ಬುಮ್ರಾ ‘ಟ್ರಂಪ್ ಕಾರ್ಡ್’ಆಗಿದ್ದಾರೆ.
ಕಟಕ್ನಲ್ಲಿ ತನ್ನ 32ನೇ ಶತಕವನ್ನು ಸಿಡಿಸಿರುವ ರೋಹಿತ್ ತನ್ನನ್ನು ಕಾಡುತ್ತಿದ್ದ ರನ್ ಬರ ನೀಗಿಸಿಕೊಂಡಿದ್ದಲ್ಲದೆ, ಇಡೀ ತಂಡಕ್ಕೆ ಆತ್ಮವಿಶ್ವಾಸವನ್ನು ತುಂಬಿದ್ದಾರೆ.
ಭಾರತ ತಂಡವು ವಿಕೆಟ್ಕೀಪರ್-ಬ್ಯಾಟರ್ ಕೆ.ಎಲ್.ರಾಹುಲ್ರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ರಾಹುಲ್ ಸದ್ಯ ಕಳಪೆ ಫಾರ್ಮ್ನಲ್ಲಿದ್ದಾರೆ.
ಭಾರತ ತಂಡವು ಎಡಗೈ ಬ್ಯಾಟರ್ ರಿಷಭ್ ಪಂತ್ ಗೆ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ನೀಡಿದರೆ ಅಚ್ಚರಿ ಎನಿಸದು.
ಭಾರತ ತಂಡಕ್ಕೆ ಮಧ್ಯಮ ಸರದಿಯಲ್ಲಿ ಶ್ರೇಯಸ್ ಅಯ್ಯರ್ ಉಪಸ್ಥಿತಿಯ ಅಗತ್ಯವಿದ್ದು, ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಕ್ಷರ್ ಪಟೇಲ್ ತಂಡಕ್ಕೆ ಶಕ್ತಿ ತುಂಬುತ್ತಿದ್ದಾರೆ. 31ರ ಹರೆಯದ ಆಲ್ ರೌಂಡರ್ ಪಟೇಲ್ ಮೊದಲೆರಡು ಏಕದಿನ ಪಂದ್ಯಗಳಲ್ಲಿ 52 ರನ್ ಹಾಗೂ ಔಟಾಗದೆ 41 ರನ್ ಗಳಿಸಿದ್ದು,5ನೇ ಕ್ರಮಾಂಕದಲ್ಲಿ ಒತ್ತಡದ ಪರಿಸ್ಥಿತಿಯಲ್ಲೂ ಪ್ರಬುದ್ಧತೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇಂಗ್ಲೆಂಡ್ ತಂಡದ ವಿರುದ್ಧ ಸರಣಿಯಲ್ಲಿ ಈ ತನಕ 6 ವಿಕೆಟ್ಗಳನ್ನು ಪಡೆದಿರುವ ರವೀಂದ್ರ ಜಡೇಜರ ಬ್ಯಾಟಿಂಗ್ ಒತ್ತಡವನ್ನು ಪಟೇಲ್ ಕಡಿಮೆ ಮಾಡಿದ್ದಾರೆ. ಸ್ಪಿನ್ ಸ್ನೇಹಿ ಪಿಚ್ನ ಲಾಭ ಪಡೆಯುತ್ತಿರುವ ಜಡೇಜ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿದ್ದಾರೆ.
ಭಾರತದ ಕ್ರಿಕೆಟ್ ಪ್ರವಾಸದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆರಂಭಿಕ ಜೋಡಿ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್ ಟಿ-20 ಹಾಗೂ ಏಕದಿನ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಲು ಯತ್ನಿಸಿದ್ದಾರೆ. ಆದರೆ ಉಳಿದ ಬ್ಯಾಟರ್ಗಳಿಂದ ಸರಿಯಾದ ಬೆಂಬಲ ಲಭಿಸಿಲ್ಲ.
‘‘ನಮ್ಮ ತಂಡ ಈಗಲೂ ಸುಧಾರಿತ ಪ್ರದರ್ಶನ ನೀಡುತ್ತಿದೆ. ಆದರೆ, ಗಾಯದ ಸಮಸ್ಯೆಯು ತಂಡವನ್ನು ಕಾಡುತ್ತಿದ್ದು, ಜೇಕಬ್ ಬೆಥೆಲ್ ಗಾಯಗೊಂಡಿದ್ದಾರೆ’’ಎಂದು ಬಟ್ಲರ್ ಹೇಳಿದ್ದಾರೆ.
ಜೋ ರೂಟ್ 2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಹ್ಯಾರಿ ಬ್ರೂಕ್ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆದಿಲ್ ರಶೀದ್ ಸ್ಪಿನ್ ಬೌಲರ್ ಆಗಿ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದಿದ್ದಾರೆ. ಆದರೆ ಇಂಗ್ಲೆಂಡ್ನ ಹಿಟ್ಟರ್ಗಳು ಮೈಚಳಿ ಬಿಟ್ಟು ಆಡದೇ ಇರುವುದು ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ.
ತಂಡಗಳು
ಭಾರತ(ಸಂಭಾವ್ಯ): 1. ರೋಹಿತ್ ಶರ್ಮಾ(ನಾಯಕ), 2.ಶುಭಮನ್ ಗಿಲ್, 3. ವಿರಾಟ್ ಕೊಹ್ಲಿ, 4.ಶ್ರೇಯಸ್ ಅಯ್ಯರ್, 5. ಕೆ.ಎಲ್.ರಾಹುಲ್(ವಿಕೆಟ್ಕೀಪರ್), 6. ಹಾರ್ದಿಕ್ ಪಾಂಡ್ಯ, 7. ರವೀಂದ್ರ ಜಡೇಜ, 8. ಅಕ್ಷರ್ ಪಟೇಲ್,9. ಕುಲದೀಪ್ ಯಾದವ್, 10. ಹರ್ಷಿತ್ ರಾಣಾ, 11. ಮುಹಮ್ಮದ್ ಶಮಿ.
ಇಂಗ್ಲೆಂಡ್(ಸಂಭಾವ್ಯ): 1. ಬೆನ್ ಡಕೆಟ್, 2. ಫಿಲ್ ಸಾಲ್ಟ್(ವಿಕೆಟ್ಕೀಪರ್), 3. ಟಾಮ್ ಬಾಂಟನ್, 4. ಜೋ ರೂಟ್, 5. ಹ್ಯಾರಿ ಬ್ರೂಕ್, 6. ಜೋಸ್ ಬಟ್ಲರ್(ನಾಯಕ), 7. ಲಿಯಾಮ್ ಲಿವಿಂಗ್ಸ್ಟೋನ್, 8. ಬ್ರೆಂಡನ್ ಕಾರ್ಸ್, 9. ಸಾಕಿಬ್ ಮಹ್ಮೂದ್/ಜೋಫ್ರಾ ಆರ್ಚರ್, 10. ಆದಿಲ್ ರಶೀದ್, 11. ಮಾರ್ಕ್ ವುಡ್.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30