ಟೀಮ್ ಇಂಡಿಯಾ ಪ್ರಧಾನ ಕೋಚ್ ನಿರ್ಧಾರ ಮುಂದೂಡಿಕೆ?
ರಾಹುಲ್ ದ್ರಾವಿಡ್ | PTI
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ರ ಅವಧಿ ಮುಂಬರುವ ಟಿ20 ವಿಶ್ವಕಪ್ ಬಳಿಕ ಮುಕ್ತಾಯಗೊಳ್ಳಲಿದ್ದು, ಅವರ ಸ್ಥಾನಕ್ಕೆ ಅಭ್ಯರ್ಥಿಯ ಶೋಧ ಕಾರ್ಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೊಡಗಿದೆ.
ಈವರೆಗೆ ಈ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಿ ಗೌತಮ್ ಗಂಭೀರ್. ಅವರಲ್ಲದೆ, ಆಶಿಶ್ ನೆಹ್ರಾ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಈ ಬಾರಿ ಕೋಚ್ ಹುದ್ದೆಗೆ ವಿದೇಶಿ ಕ್ರಿಕೆಟಿಗರಿಂದ ಹೆಚ್ಚು ಅರ್ಜಿಗಳು ಬಂದಿಲ್ಲ ಎಂದು ವರದಿಯೊಂದು ತಿಳಿಸಿದೆ. ಅದೂ ಅಲ್ಲದೆ, ತಂಡದಿಂದಲೇ ಬಂದಿರುವ ಮತ್ತು ದೇಶಿ ಕ್ರಿಕೆಟನ್ನು ಚೆನ್ನಾಗಿ ತಿಳಿದಿರುವ ವ್ಯಕ್ತಿಯೊಬ್ಬರನ್ನೇ ಕೋಚ್ ಆಗಿ ನೇಮಿಸುವ ಇಂಗಿತವನ್ನೂ ಬಿಸಿಸಿಐ ಹೊಂದಿದೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು. ಆದರೆ, ಆಟಗಾರರು ಈಗ ಟಿ20 ವಿಶ್ವಕಪ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲಿ, ಮುಂದಿನ ಕೋಚ್ ಆಯ್ಕೆಯ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಸ್ವಲ್ಪ ಸಮಯ ತೆಗೆದುಕೊಳ್ಳಬಹುದಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಟಿ20 ವಿಶ್ವಕಪ್ ಬಳಿಕ, ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಗಳಿಗೆ ಬಿಸಿಸಿಐಯು ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಕೋಚ್ಗಳನ್ನು ಕಳುಹಿಸಬಹುದಾಗಿದೆ.
“ಗಡುವು ಇದೆ ಹೌದು. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಸಮಯವನ್ನು ಬಿಸಿಸಿಐ ತೆಗೆದುಕೊಳ್ಳಬಹುದು. ಜೂನ್ನಲ್ಲಿ ತಂಡವು ಟಿ20 ವಿಶ್ವಕಪ್ನಲ್ಲಿ ತೊಡಗಿರುತ್ತದೆ. ಬಳಿಕ, ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಆ ಪ್ರವಾಸಗಳಿಗೆ ಎನ್ಸಿಎ ಕೋಚ್ಗಳು ತಂಡದೊಂದಿಗೆ ಹೋಗಬಹುದು. ಹಾಗಾಗಿ, ಪ್ರಧಾನ ಕೋಚ್ ಆಯ್ಕೆಯಲ್ಲಿ ಅವಸರವಿಲ್ಲ’’ ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.