ಆಸ್ಟ್ರೇಲಿಯದಲ್ಲಿ ಸೋಲುತ್ತಿರುವ ಟೀಮ್ ಇಂಡಿಯಾ : ಕೋಚ್ ಗಂಭೀರ್ ಕಾರ್ಯವೈಖರಿಗೆ ಅಸಮಾಧಾನ
ಗೌತಮ್ ಗಂಭೀರ್ | PC : PTI
ಹೊಸದಿಲ್ಲಿ: ನಾಯಕ ರೋಹಿತ್ ಶರ್ಮಾ ಹಾಗೂ ಸೀನಿಯರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸದ್ಯ ಆಸ್ಟ್ರೇಲಿಯ ವಿರುದ್ದ ಟೆಸ್ಟ್ ಸರಣಿಯಲ್ಲಿ ಗೆಲುವಿಗಾಗಿ ಪರದಾಟ ನಡೆಸುತ್ತಿದ್ದು, ಸ್ಥಿತ್ಯಂತರದಲ್ಲಿರುವ ಟೀಮ್ ಇಂಡಿಯಾದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಅವರ ಸಹಾಯಕ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಕ್ರಮಣಕಾರಿ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ದಿಟ್ಟವಾಗಿ ಎದುರಿಸುವಲ್ಲಿ ಭಾರತ ತಂಡ ಪರದಾಟ ನಡೆಸುತ್ತಿದೆ. ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಾದರೆ ಭಾರತ ತಂಡವು ಶುಕ್ರವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಮೈದಾನದ ಹೊರಗಿನ ಸಮಸ್ಯೆಗಳು ಮೈದಾನದೊಳಗೆ ಕಾಣಿಸಿಕೊಳ್ಳುತ್ತಿದ್ದು, ಡ್ರೆಸ್ಸಿಂಗ್ ರೂಮ್ನಲ್ಲಿ ಅಸಮಾಧಾನವಿದೆ ಎಂಬ ವದಂತಿಗಳು ಹರಡಲು ಆರಂಭವಾಗಿದೆ.
ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ಅವಧಿಯಲ್ಲಿದ್ದ ಉತ್ತಮ ಸಂವಹನವು ಈಗ ಇಲ್ಲವಾಗಿದೆ. ತಂಡದ ಹೆಚ್ಚಿನ ಆಟಗಾರರನ್ನು ಗಂಭೀರ್ ಒಪ್ಪುವುದಿಲ್ಲ ಎಂದು ವರದಿಯಾಗಿದೆ.
ಆಯ್ಕೆ ಸಂಬಂಧಿತ ವಿಷಯಗಳನ್ನು ಪ್ರತಿಯೊಬ್ಬ ಆಟಗಾರರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಬೇಕು ಎಂದು ನಾಯಕ ರೋಹಿತ್ ಶರ್ಮಾ ಒತ್ತಾಯಿಸಿದ್ದಾರೆ. ಆದರೆ ಜುಲೈನಲ್ಲಿ ಗಂಭೀರ್ ಕೋಚ್ ಆಗಿ ಅಧಿಕಾರವಹಿಸಿಕೊಂಡ ನಂತರ ಸಾಂದರ್ಭಿಕವಾಗಿ ಕೆಲವು ಹಿರಿಯ ಆಟಗಾರರು ತಂಡದಿಂದ ಏಕೆ ಹೊರಗುಳಿದಿದ್ದಾರೆ ಎಂಬುದನ್ನು ರೋಹಿತ್ ಕೆಲವು ಹಿರಿಯ ಆಟಗಾರರಿಗೆ ವಿವರಿಸಿಲ್ಲ ಎಂದು ಆರೋಪಿಸಲಾಗಿದೆ.
ಇನ್ನೊಂದು ಟೆಸ್ಟ್ ಪಂದ್ಯ ಆಡಲು ಬಾಕಿ ಇದೆ. ಆ ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಈಗಿನ ಪ್ರದರ್ಶನ ಸುಧಾರಿಸದಿದ್ದರೆ, ಗೌತಮ್ ಗಂಭೀರ್ ಅವರ ಸ್ಥಾನವೂ ಸುರಕ್ಷಿತವಾಗಿರುವುದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆಡುವ 11ರ ಬಳಗವನ್ನು ಬದಲಾಯಿಸುತ್ತಿರುವ ಪ್ರವೃತ್ತಿಯಿಂದಾಗಿ ತಂಡದ ಕೆಲವು ಆಟಗಾರರು ಆತಂಕಕ್ಕೊಳಗಾಗಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯ ತಂಡದ ವಿರುದ್ಧ ಟೆಸ್ಟ್ ಸರಣಿಯಲಿ ನಿತೀಶ್ ರೆಡ್ಡಿ ಅಮೋಘ ಪ್ರದರ್ಶನ ನೀಡಿದ್ದಾರೆ. ಆದರೆ ಶುಭಮನ್ ಗಿಲ್ ಅವರನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತು ಈಗಲೂ ಭಿನ್ನಾಭಿಪ್ರಾಯ ಇದೆ.
ಫೆಬ್ರವರಿ ಅಥವಾ ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡದೇ ಇದ್ದರೆ ಗಂಭೀರ್ ಅವರ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ. ಕೋಚ್ ಹುದ್ದೆಗೆ ಗಂಭೀರ್ ಅವರು ಬಿಸಿಸಿಐನ ಮೊದಲ ಆಯ್ಕೆಯಾಗಿರಲಿಲ್ಲ. ವಿವಿಎಸ್ ಲಕ್ಷ್ಮಣ್ ಮೊದಲ ಆಯ್ಕೆಯಾಗಿದ್ದರು. ಕೆಲವು ವಿದೇಶಿ ಕೋಚ್ಗಳು ಎಲ್ಲ ಮೂರು ಮಾದರಿ ಕ್ರಿಕೆಟ್ನಲ್ಲಿ ತರಬೇತಿ ನೀಡಲು ಹಿಂದೇಟು ಹಾಕಿದ್ದರು. ಹೀಗಾಗಿ ಗಂಭೀರ್ ರಾಜಿಯಾಗಿದ್ದರು. ಇನ್ನು ಕೆಲವು ನಿರ್ಬಂಧಗಳು ಇದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತ ನಂತರ ಗಂಭೀರ್ ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದರು. ಒಂದು ವೇಳೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲೂ ಭಾರತ ತಂಡ ಸೋತರೆ ದಿಲ್ಲಿಯ ಮಾಜಿ ಆರಂಭಿಕ ಆಟಗಾರ ಇನ್ನಷ್ಟು ಸಮಸ್ಯೆಗೆ ಸಿಲುಕುತ್ತಾರೆ.
ಗಂಭೀರ್ ಅವರನ್ನು ಟಿ20 ತಂಡದ ಕೋಚ್ ಆಗಿ ಮಾತ್ರ ನೇಮಿಸಬೇಕೆಂಬ ಕುರಿತು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಗಂಭೀರ್ ಅವರು ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳಲ್ಲಿ ಯಶಸ್ವಿ ನಾಯಕ ಹಾಗೂ ಕೋಚ್ ಆಗಿದ್ದರು.