ವಿರಾಟ್ ಕೊಹ್ಲಿ ನನ್ನ ನಾಯಕತ್ವದ ತಂಡದಲ್ಲಿ ಆಡಿದ್ದಾರೆ ಎಂದ ತೇಜಸ್ವಿ ಯಾದವ್!
ಹೌದು, ಡ್ರೀಮ್ 11 ತಂಡ ಕಟ್ಟಿ ಆಡಿದ್ದರು ಎಂದು ಟ್ರೋಲ್ ಮಾಡಿದ ಜನರು
ತೇಜಸ್ವಿ ಯಾದವ್ | PC : PTI
ಹೊಸದಿಲ್ಲಿ : ವಿರಾಟ್ ಕೊಹ್ಲಿ ಒಮ್ಮೆ ನನ್ನ ನಾಯಕತ್ವದ ತಂಡದಲ್ಲಿ ಆಡಿದ್ದರು ಎಂದು ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು ತೇಜಸ್ವಿ ಯಾದವ್ ಕ್ರಿಕೆಟಿಗರಾಗಿದ್ದರು ಮತ್ತು ಐಪಿಎಲ್ ನಲ್ಲೂ ಭಾಗವಹಿಸಿದ್ದರು. ನನ್ನ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ ಎಂದು ತೇಜಸ್ವಿ ಯಾದವ್ ಅವರು ಹೇಳಿಕೊಂಡಿದ್ದಾರೆ ಎಂದು ZEE News ವರದಿ ಮಾಡಿದೆ.
ಲಾಲು ಪ್ರಸಾದ್ ಯಾದವ್ ಭಾರತದ ರೈಲ್ವೆ ಸಚಿವರಾಗಿದ್ದಾಗ ತೇಜಸ್ವಿ ಯಾದವ್ ಕ್ರಿಕೆಟ್ ಪಂದ್ಯಗಳಲ್ಲಿ ಸಕ್ರಿಯರಾಗಿದ್ದರು. ಅವರು 2008ರ IPL ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರ ಕ್ರಿಕೆಟ್ ವೃತ್ತಿಜೀವನವು 2010ರ ವೇಳೆಗೆ ಕೊನೆಗೊಂಡಿತ್ತು.
ESPN ಪ್ರಕಾರ, ಯಾದವ್ ಅವರು ವೃತ್ತಿಜೀವನದ ನಾಲ್ಕು T20 ಪಂದ್ಯಗಳಲ್ಲಿ ಆಡಿದ್ದಾರೆ. ಇದಲ್ಲದೆ ದಿಲ್ಲಿ ಪರ U-15 ಮತ್ತು U-19 ತಂಡಗಳನ್ನು ಮುನ್ನಡೆಸಿದ್ದರು. ಈ ವೇಳೆ ಕೊಹ್ಲಿ ತಂಡದ ಸದಸ್ಯರಾಗಿದ್ದರು ಎನ್ನಲಾಗಿದೆ.
ʼನನ್ನ ಕ್ರಿಕೆಟ್ ಜೀವನದ ಬಗ್ಗೆ ಯಾರೂ ಮಾತನಾಡುವುದಿಲ್ಲ. ವೃತ್ತಿಯಲ್ಲಿ ನಾನು ಕ್ರಿಕೆಟಿಗನಾಗಿದ್ದೆ. ನಾನು ಉತ್ತಮವಾಗಿ ಕ್ರಿಕೆಟ್ ಆಡಿದ್ದೇನೆ. ಟೀಮ್ ಇಂಡಿಯಾದಲ್ಲಿ ನನ್ನ ಬ್ಯಾಚ್ಮೇಟ್ ಗಳಿದ್ದಾರೆʼ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಇದ್ದ ತಂಡದಲ್ಲಿ ನಾನು ನಾಯಕನಾಗಿದ್ದೆ ಎಂಬ ತೇಜಸ್ವಿ ಯಾದವ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟ್ರೋಲ್ ಗೆ ಒಳಗಾಗಿದೆ.
ಸರಿ ಅವರು ಹೇಳುವುದು ತಪ್ಪಿಲ್ಲ. ಅವರು ಆನ್ ಲೈನ್ ಗೇಮ್ ಡ್ರೀಮ್11 ಬಗ್ಗೆ ಮಾತನಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರೋರ್ವರು ಟ್ರೋಲ್ ಮಾಡಿದ್ದಾರೆ.
ಗಾಯವು ಅವರ ವೃತ್ತಿಜೀವನವನ್ನು ಹಾಳುಮಾಡಿತು, ಇಲ್ಲದಿದ್ದರೆ, ಅವರು ಸುಮಾರು 110 ಶತಕಗಳನ್ನು ಗಳಿಸುತ್ತಿದ್ದರು ಎಂದು ಇನ್ನೊಬ್ಬರು ಟ್ರೋಲ್ ಮಾಡಿದ್ದಾರೆ.
ಹೌದು .. ಅವರು ಗಾಯಗೊಂಡಿರದಿದ್ದರೆ ಕೊಹ್ಲಿಯೊಂದಿಗೆ ಆಡುವುದನ್ನು ನಾವು ನೋಡಬಹುದಿತ್ತು ಎಂದು ಮತ್ತೊಬ್ಬ ಬಳಕೆದಾರ ಟ್ರೋಲ್ ಮಾಡಿದ್ದಾರೆ.