ಧೋನಿ ಹೆಸರಲ್ಲಿ ದೇವಾಲಯಗಳು ನಿರ್ಮಾಣವಾಗಲಿವೆ: ಅಂಬಟಿ ರಾಯುಡು
ಮಹೇಂದ್ರ ಸಿಂಗ್ ಧೋನಿ, ಅಂಬಟಿ ರಾಯುಡು | PC : PTI
ಚೆನ್ನೈ: ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK)ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿ ದೇವಾಲಯಗಳು ನಿರ್ಮಾಣವಾಗಲಿವೆ ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ 5 ವಿಕೆಟ್ ಗಳ ಗೆಲುವು ದಾಖಲಿತು. ರಾಜಸ್ಥಾನ ನೀಡಿದ್ದ 141 ರನ್ ಗಳ ಸುಲಭ ಗುರಿಯನ್ನು ಚೆನ್ನೈ 18.2 ಓವರ್ಗಳಲ್ಲಿ ತಲುಪಿತು.
ಈ ಪಂದ್ಯ ಪ್ರಸಕ್ತ ಆವೃತ್ತಿಯ ಐಪಿಎಲ್ ನಲ್ಲಿ ಚೆನ್ನೈ ತಂಡ ತವರಿನಲ್ಲಿ ಆಡಿರುವ ಕೊನೆಯ ಪಂದ್ಯವಾಗಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಪಂದ್ಯದುದ್ದಕ್ಕೂ ಸಿಎಸ್ಕೆ, ಧೋನಿ, ತಲಾ ಎಂದು ಘೋಷಣೆಗಳನ್ನು ಕೂಗಿದ್ದರು. 42ರ ಹರೆಯದ ಧೋನಿ ಆಟಗಾರನಾಗಿ ಇದು ಕೊನೆಯ ಪಂದ್ಯವಾಗುವ ಸಾಧ್ಯತೆಯಿದ್ದು , ಮುಂದಿನ ಐಪಿಎಲ್ ಋತುವಿನಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ.
ಈ ಕುರಿತು ಪಂದ್ಯದ ನಂತರ ಮಾತನಾಡಿರುವ ರಾಯುಡು, ಧೋನಿ ಚೆನ್ನೈನ ದೇವರು. ಮುಂದಿನ ದಿನಗಳಲ್ಲಿ ಅವರ ಹೆಸರಲ್ಲಿ ದೇವಾಲಯಗಳು ನಿರ್ಮಾಣಗೊಳ್ಳುವ ಬಗ್ಗೆ ನನಗೆ ಖಾತ್ರಿ ಇದೆ ಎಂದರು.
ಧೋನಿ ಓರ್ವ ದಂತಕತೆ. ಎಲ್ಲರೂ ಅವರ ಆಟವನ್ನು ಸಂಭ್ರಮಿಸುತ್ತಾರೆ. ಬಹುಶಃ ಚೆನ್ನೈನಲ್ಲಿ ಇದು ಅವರ ಕೊನೆಯ ಪಂದ್ಯ ಎಂದು ಅಭಿಮಾನಿಗಳು ಭಾವಿಸಿರಬಹುದು ಎಂದು ರಾಯುಡು ಹೇಳಿದ್ದಾರೆ.
ಟೀಮ್ ಇಂಡಿಯಾದ ನಾಯಕರಾಗಿದ್ದ ಧೋನಿ, ಭಾರತಕ್ಕೆ 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಎರಡು ಬಾರಿ ಚಾಂಪಿಯನ್ಸ್ ಲೀಗ್ ಹಾಗೂ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಚೆನ್ನೈ ತಂಡದ ಮುಡಿಗೇರಿಸಿದ್ದಾರೆ.