ಟೆಸ್ಟ್ ಕ್ರಿಕೆಟ್: ಭಾರತದ ಅತ್ಯಂತ ಯಶಸ್ವಿ ಬೌಲಿಂಗ್ ಜೋಡಿ ಎನಿಸಿಕೊಂಡ ಅಶ್ವಿನ್-ಜಡೇಜ
ಅನಿಲ್ ಕುಂಬ್ಳೆ-ಹರ್ಭಜನ್ ಸಿಂಗ್ ದಾಖಲೆ ಪತನ
Photo: ರವಿಚಂದ್ರನ್ ಅಶ್ವಿನ್ , ರವೀಂದ್ರ ಜಡೇಜ | Photo: PTI
ಹೊಸದಿಲ್ಲಿ: ಅವಳಿ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲಿಂಗ್ ಜೋಡಿ ಆಗಿ ಹೊರಹೊಮ್ಮಿದೆ.
ಇಂಗ್ಲೆಂಡ್ ವಿರುದ್ಧ ಹೈದರಾಬಾದ್ನಲ್ಲಿ ಗುರುವಾರ ನಡೆದ ಮೊದಲ ಟೆಸ್ಟ್ ನ ಮೊದಲ ದಿನದಾಟದಲ್ಲಿ ಈ ಇಬ್ಬರು ಒಟ್ಟಿಗೆ 6 ವಿಕೆಟ್ ಗಳನ್ನು ಉರುಳಿಸಿದರು. ಈ ಮೂಲಕ ಲೆಜೆಂಡರಿ ಜೋಡಿ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ದಾಖಲೆಯನ್ನು ಪತನಗೊಳಿಸಿದರು.
ಅಶ್ವಿನ್ ಹಾಗೂ ಜಡೇಜ ಇದೀಗ 50 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 504 ವಿಕೆಟ್ ಗಳನ್ನು ಕಬಳಿಸಿ ಮಹತ್ವದ ದಾಖಲೆ ನಿರ್ಮಿಸಿದರು. ಈ ಮೂಲಕ 54 ಟೆಸ್ಟ್ ಪಂದ್ಯಗಳಲ್ಲಿ 501 ವಿಕೆಟ್ ಕಬಳಿಸಿ ಕುಂಬ್ಳೆ-ಹರ್ಭಜನ್ ನಿರ್ಮಿಸಿರುವ ಮೈಲಿಗಲ್ಲನ್ನು ಮುರಿದರು.
ಈ ಸಾಧನೆಯ ಮೂಲಕ ಅಶ್ವಿನ್-ಜಡೇಜ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಈ ಜೋಡಿ 138 ಪಂದ್ಯಗಳಲ್ಲಿ 1,039 ವಿಕೆಟ್ ಗಳನ್ನು ಉರುಳಿಸಿದೆ. ಆ ನಂತರ ಆಸ್ಟ್ರೇಲಿಯದ ಲೆಜೆಂಡ್ ಗಳಾದ ಶೇನ್ ವಾರ್ನ್ ಹಾಗೂ ಗ್ಲೆನ್ ಮೆಕ್ಗ್ರಾತ್ 104 ಟೆಸ್ಟ್ ಗಳಲ್ಲಿ 1,001 ವಿಕೆಟ್ ಉರುಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಈಗ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಹಾಗೂ ಜಡೇಜ ಜೋಡಿ ಇಂಗ್ಲೆಂಡ್ ಪ್ರಗತಿಯನ್ನು ಆರಂಭದಲ್ಲೇ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್ ಗಳನ್ನು ಸೇರಿಸಿಕೊಳ್ಳುವ ಮೂಲಕ ದಿಟ್ಟ ತಂತ್ರ ರೂಪಿಸಿದೆ. ರೂಟ್ ಅರೆಕಾಲಿಕ ಬೌಲರ್ ಆಗಿದ್ದು, ಮಾರ್ಕ್ ವುಡ್ ಏಕೈಕ ವೇಗದ ಬೌಲರ್ ಆಗಿದ್ದಾರೆ.
ಪಂದ್ಯ ಮುಂದುವರಿದಂತೆ ಅಶ್ವಿನ್-ಜಡೇಜ ಜೊತೆಯಾಟವು ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.