ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ; ಮೊದಲೆರಡು ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
Photo: BCCI
ಹೊಸದಿಲ್ಲಿ : ಈ ವರ್ಷ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಜನವರಿ 4ರಂದು ಕೇಪ್ಟೌನ್ ನಲ್ಲಿ ಮೊತ್ತ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಜನವರಿ 25ರಂದು ಹೈದರಾಬಾದಿನ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಮ್ ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.
ಉತ್ತರಪ್ರದೇಶದ ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿ ಕರೆ ಪಡೆದಿದ್ದಾರೆ. ಜುರೆಲ್ ಅವರು ಕೆ.ಎಲ್.ರಾಹುಲ್ ಹಾಗೂ ಕೆ.ಎಸ್. ಭರತ್ ನಂತರ ತಂಡದಲ್ಲಿರುವ ಮೂರನೇ ವಿಕೆಟ್ ಕೀಪರ್ ಆಗಿದ್ದಾರೆ.
ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಆಯ್ಕೆಯಾಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ವಿಶ್ರಾಂತಿ ಪಡೆದಿದ್ದ ಇಶಾನ್ ಕಿಶನ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸಗೈದ ತಂಡದಲ್ಲಿರುವ ಹೆಚ್ಚಿನ ಆಟಗಾರರನ್ನೇ ಉಳಿಸಿಕೊಳ್ಳಲಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಅವೇಶ್ ಖಾನ್ರನ್ನು ಉಳಿಸಿಕೊಳ್ಳಲಾಗಿದೆ. ಅವೇಶ್ರನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮುಹಮ್ಮದ್ ಶಮಿ ಬದಲಿಗೆ ಆಯ್ಕೆ ಮಾಡಲಾಗಿತ್ತು. ಅವೇಶ್ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಷ್ಟೇ ಆಡಬೇಕಾಗಿದೆ. ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಹಿರಿಯ ವೇಗಿ ಮುಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಶಮಿ ಇಂಗ್ಲೆಂಡ್ ಸರಣಿಗೆ ವಾಪಸಾಗುವ ಆಶಾವಾದದಲ್ಲಿದ್ದರು. ಕಳೆದ ವರ್ಷ ವಿಶ್ವಕಪ್ ಫೈನಲ್ ಪಂದ್ಯ ಆಡಿದ ನಂತರ 33ರ ಹರೆಯದ ಶಮಿ ಯಾವುದೇ ಸ್ಪರ್ಧಾತ್ಮಕ ಪಂದ್ಯ ಆಡಿಲ್ಲ.
ಉಪ ನಾಯಕ ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಮುಕೇಶ್ ಕುಮಾರ್ ವೇಗದ ಬೌಲಿಂಗ್ ವಿಭಾಗದಲ್ಲಿರುವ ಇನ್ನುಳಿದ ಬೌಲರ್ಗಳಾಗಿದ್ದಾರೆ.
ಭಾರತವು ಸ್ಪಿನ್ ವಿಭಾಗವನ್ನೇ ಹೆಚ್ಚು ಅವಲಂಬಿಸಿದೆ. ಆರ್.ಅಶ್ವಿನ್, ರವೀಂದ್ರ ಜಡೇಜ ಜೊತೆಗೆ ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಸೇರಿಕೊಂಡಿದ್ದಾರೆ.
*ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್ಕೀಪರ್), ಕೆ.ಎಸ್. ಭರತ್(ವಿಕೆಟ್ಕೀಪರ್), ಧ್ರುವ್ ಜುರೆಲ್(ವಿಕೆಟ್ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ(ಉಪನಾಯಕ) ಹಾಗೂ ಅವೇಶ್ ಖಾನ್.