ಟೆಸ್ಟ್ ಸರಣಿ: ಭಾರತಕ್ಕೆ ಉತ್ತಮ ಮೊತ್ತ; ವೆಸ್ಟ್ಇಂಡೀಸ್ ದಿಟ್ಟ ಹೋರಾಟ
ಹೊಸದಿಲ್ಲಿ: ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನೆರವಿನೊಂದಿಗೆ ವೆಸ್ಟ್ಇಂಡೀಸ್ ವಿರುದ್ಧದ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ 438 ರನ್ಗಳನ್ನು ಕಲೆ ಹಾಕಿದೆ. ಮೊದಲ ಟೆಸ್ಟ್ಗೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡಿರುವ ವೆಸ್ಟ್ಇಂಡೀಸ್ ಬ್ಯಾಟ್ಸ್ ಮನ್ ಗಳು ದಿಟ್ಟ ಹೋರಾಟ ನೀಡಿದ್ದು, ಎರಡನೇ ದಿನದ ಅಂತ್ಯದ ವೇಳೆಗೆ ವೆಸ್ಟ್ಇಂಡೀಸ್ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
ಕೊಹ್ಲಿಯವರ 29ನೇ ಟೆಸ್ಟ್ ಶತಕದ ನೆರವಿನೊಂದಿಗೆ ಭಾರತ ಕಲೆಹಾಕಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ಇಂಡೀಸ್ ತಂಡದ ಆರಂಭಿಕ ಜೋಡಿ ಕ್ರೆಗ್ ಬ್ರೆತ್ ವೈಟ್ ಹಾಗೂ ತಗೆನರೇನ್ ಚಂದ್ರಪಾಲ್ ಮೊದಲ ವಿಕೆಟ್ಗೆ 71 ರನ್ಗಳನ್ನು ಕಲೆ ಹಾಕಿದರು. ದಿನದ ಆಟದ ಅಂತ್ಯದ ವೇಳೆಗೆ ವೆಸ್ಟ್ಇಂಡೀಸ್ 352 ರನ್ ಗಳ ಹಿನ್ನಡೆ ಹೊಂದಿದ್ದು, ಬ್ರೆತ್ ವೈಟ್ ಮತ್ತು ಕ್ರಿಕ್ ಮೆಕೆಂಝೀನ್ ಕ್ರಮವಾಗಿ 37 ಹಾಗೂ 14 ರನ್ಗಳೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ 29ನೇ ಶತಕ ದಾಖಲಿಸುವ ಮೂಲಕ ಡಾನ್ ಬ್ರಾಡ್ ಮನ್ ದಾಖಲೆ ಸರಿಗಟ್ಟಿದ ಕೊಹ್ಲಿ 206 ಎಸೆತಗಳಲ್ಲಿ 121 ರನ್ ಗಳಿಸಿ ಔಟ್ ಆದರು. ಇದು ಅವರ 500ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ 76ನೇ ಶತಕವಾಗಿದೆ. ಐದನೇ ವಿಕೆಟ್ಗೆ ರವೀಂದ್ರ ಜಡೇಜಾ (61) ಅವರ ಜತೆ 159 ರನ್ ಕಲೆ ಹಾಕಿದ ಕೊಹ್ಲಿ, ಭಾರತದ ಉತ್ತಮ ಮೊತ್ತಕ್ಕೆ ಕೊಡುಗೆ ನೀಡಿದರು.
ಬಳಿಕ ಆರ್.ಅಶ್ವಿನ್ 78 ಎಸೆತಗಳಲ್ಲಿ 56 ರನ್ ಗಳಿಸಿ ಭಾರತ 400 ರ ಗಡಿ ದಾಟಲು ನೆರವಾದರು. ವೆಸ್ಟ್ಇಂಡೀಸ್ ಆರಂಭಿಕ ಜೋಡಿ ಉತ್ತಮ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿತು. ಭಾರತದ ಪರ ರವೀಂದ್ರ ಜಡೇಜಾ 10 ಓವರ್ಗಳಲ್ಲಿ 12 ರನ್ ನೀಡಿ ಒಂದು ವಿಕೆಟ್ ಪಡೆದರು.