ಥಾಯ್ಲೆಂಡ್ ಓಪನ್: ಸಾತ್ವಿಕ್-ಚಿರಾಗ್ ಶೆಟ್ಟಿ ಫೈನಲ್ಗೆ
ಸಾತ್ವಿಕ್-ಚಿರಾಗ್ ಶೆಟ್ಟಿ | PC : PTI
ಬ್ಯಾಂಕಾಕ್: ಭಾರತದ ಪ್ರಮುಖ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೈನೀಸ್ ತೈಪೆಯ ಲು ಮಿಂಗ್-ಚೆ ಹಾಗೂ ಟಾಂಗ್ ಕೈ-ವೀ ಅವರನ್ನು ನೇರ ಗೇಮ್ಗಳ ಅಂತರದಿಂದ ಸುಲಭವಾಗಿ ಸೋಲಿಸಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಕೇವಲ 35 ನಿಮಿಷಗಳಲ್ಲಿ ಅಂತ್ಯಗೊಂಡ ಸೂಪರ್-500 ಟೂರ್ನಮೆಂಟ್ನ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.80ನೇ ರ್ಯಾಂಕಿನ ಎದುರಾಳಿಗಳನ್ನು 21-11, 21-12 ಗೇಮ್ಗಳ ಅಂತರದಿಂದ ಸೋಲಿಸಿದರು.
ಸಾತ್ವಿಕ್ ಹಾಗೂ ಚಿರಾಗ್ ಥಾಯ್ಲೆಂಡ್ನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದು, ಐದು ವರ್ಷಗಳ ಹಿಂದೆ 2019ರಲ್ಲಿ ತಮ್ಮ ಚೊಚ್ಚಲ ಸೂಪರ್-500 ಟೂರ್ನಿಯನ್ನು ಜಯಿಸಿದ್ದರು.
ಶನಿವಾರ ಮತ್ತೊಮ್ಮೆ ಫೈನಲ್ಗೆ ತಲುಪಿರುವ ಭಾರತದ ಜೋಡಿ ಮತ್ತೊಂದು ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇಟ್ಟಿದೆ.
ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ 4ನೇ ಬಾರಿ ಫೈನಲ್ಗೆ ಲಗ್ಗೆ ಇರಿಸುವ ಮೂಲಕ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ನಲ್ಲಿ ಅಲೆಗಳನ್ನು ಎಬ್ಬಿಸುವುದನ್ನು ಮುಂದುವರಿಸಿದ್ದಾರೆ. ಈ ಜೋಡಿಯು ಮಲೇಶ್ಯ ಸೂಪರ್-1000 ಹಾಗೂ ಇಂಡಿಯಾ ಸೂಪರ್-750 ಟೂರ್ನಿಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಜಯಿಸಿದ್ದು, ಮಾರ್ಚ್ನಲ್ಲಿ ಫ್ರೆಂಚ್ ಸೂಪರ್ 750 ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಈ ಟೂರ್ನಮೆಂಟ್ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ವಿಶ್ವದ ನಂ.3ನೇ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ರವಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಚೈನೀಸ್ ಜೋಡಿ ಚೆನ್ ಬೊ ಯಾಂಗ್ ಹಾಗೂ ಲಿಯು ಅವರನ್ನು ಎದುರಿಸಲಿದ್ದಾರೆ. ಚೀನಾದ ಜೋಡಿ ಶನಿವಾರ ನಡೆದ ಮತ್ತೊಂದು ಸೆಮಿ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಐ ಜುಂಗ್ ಹಾಗೂ ಕಿಮ್ ಸಾ ರಾಂಗ್ರನ್ನು 21-19, 21-18 ಗೇಮ್ಗಳ ಅಂತರದಿಂದ ಸೋಲಿಸಿದರು.
ಸಾತ್ವಿಕ್ ಹಾಗೂ ಚಿರಾಗ್ ಕಳೆದ ಕೆಲವು ಟೂರ್ನಮೆಂಟ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಭಾರತದ ಜೋಡಿ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ 2ನೇ ಸುತ್ತಿನಲ್ಲಿ ಸೋತಿತ್ತು. ಆ ನಂತರ ಸಾತ್ವಿಕ್ ಗಾಯಗೊಂಡ ಕಾರಣ ಏಶ್ಯ ಚಾಂಪಿಯನ್ಶಿಪ್ನಿಂದ ವಂಚಿತವಾಗಿತ್ತು.
ಥಾಮಸ್ ಕಪ್ ಅಭಿಯಾನ ಕೂಡ ಹೆಚ್ಚು ಫಲದಾಯಕವಾಗಿರಲಿಲ್ಲ. ಅಲ್ಲಿ ಅಗ್ರ ಜೋಡಿಯ ವಿರುದ್ಧ ಕಡಿಮೆ ಅಂತರದಿಂದ ಪಂದ್ಯಗಳನ್ನು ಸೋತಿದ್ದಾರೆ. ಇದೀಗ ಫೈನಲ್ನಲ್ಲಿ ಕಾಣಿಸಿಕೊಂಡಿರುವ ಸಾತ್ವಿಕ್ ಹಾಗೂ ಚಿರಾಗ್ ಪ್ಯಾರಿಸ್ ಒಲಿಂಪಿಕ್ಸ್ಗಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.