ಗುಕೇಶ್-ಲಿರೆನ್ ನಡುವಿನ ನಿರಂತರ 7ನೇ ಪಂದ್ಯವೂ ಡ್ರಾ
ಫಿಡೆ ವಿಶ್ವ ಚೆಸ್ ಚಾಂಪಿಯನ್ಶಿಪ್ 2024 ಫೈನಲ್
ಡಿಂಗ್ ಲಿರೆನ್ , ಡಿ.ಗುಕೇಶ್ | PTI
ಸಿಂಗಾಪುರ : ಸಿಂಗಾಪುರದಲ್ಲಿ ನಡೆಯುತ್ತಿರುವ ಫಿಡೆ ವಿಶ್ವ ಚೆಸ್ ಚಾಂಪಿಯನ್ಶಿಪ್ 2024 ಫೈನಲ್ನ 10ನೇ ಸುತ್ತಿನ ಪಂದ್ಯವನ್ನೂ ಭಾರತದ ಡಿ. ಗುಕೇಶ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಶನಿವಾರ ಡ್ರಾ ಮಾಡಿಕೊಂಡಿದ್ದಾರೆ. ಇದು ಅವರ ನಿರಂತರ ಏಳನೇ ಡ್ರಾ ಆಗಿದ್ದು, ಬಿಕ್ಕಟ್ಟು ಮುಂದುವರಿದಿದೆ.
ಈಗ ಅವರು 5-5 ಅಂಕಗಳೊಂದಿಗೆ ಸಮಬಲದಲ್ಲಿದ್ದಾರೆ. ಕ್ಲಾಸಿಕಲ್ ಮಾದರಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇನ್ನು ಕೇವಲ ನಾಲ್ಕು ಪಂದ್ಯಗಳು ಉಳಿದಿವೆ. ಎದುರಾಳಿಗಳು 7-7 ಅಂಕಗಳಿಂದ ಸಮಬಲರಾದರೆ, ಟೈ-ಬ್ರೇಕರ್ (ವೇಗದ ಚೆಸ್) ಪಂದ್ಯವೊಂದನ್ನು ಆಡಲಾಗುವುದು.
ಕೆಲವೇ ಪಂದ್ಯಗಳು ಬಾಕಿಯಿದ್ದು, ಒಂದೊಂದು ಪಂದ್ಯವೂ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ, ಇಬ್ಬರೂ ಆಟಗಾರರು ಸತತ ಎರಡನೇ ಪಂದ್ಯವನ್ನೂ ಸುರಕ್ಷಿತವಾಗಿ ಆಡಲು ನಿರ್ಧರಿಸಿದರು. ಇನ್ನು ಒಂದು ಸೋಲು ಕೂಡ ಆಟಗಾರರಿಗೆ ದುಬಾರಿಯಾಗಲಿದೆ. ಒಂದೇ ಒಂದು ಸೋಲಿನ ಬಳಿಕ, ಸ್ಪರ್ಧೆಗೆ ಮರಳುವುದು ಕಷ್ಟಸಾಧ್ಯ.
ಮೊದಲ ಸುತ್ತಿನ ಪಂದ್ಯವನ್ನು ಲಿರೆನ್ ಗೆದ್ದಿದ್ದರು. ಬಳಿಕ, ಎರಡನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಗುಕೇಶ್ ಯಶಸ್ವಿಯಾಗಿದ್ದರು. ಮೂರನೇ ಸುತ್ತಿನ ಪಂದ್ಯವನ್ನು ಗುಕೇಶ್ ಗೆದ್ದು ಸವಾಲನ್ನು ಸಮಬಲದಲ್ಲಿರಿಸಿದ್ದರು. ಆದರೆ, 14 ಸುತ್ತುಗಳ ಪಂದ್ಯಾವಳಿಯಲ್ಲಿ, ಆ ನಂತರದ ಎಲ್ಲಾ 7 ಪಂದ್ಯಗಳು ಡ್ರಾಗೊಂಡಿವೆ.
ಏಳು ಅಂಕಗಳನ್ನು ಮೊದಲು ಗಳಿಸುವ ಆಟಗಾರನನ್ನು ವಿಜಯಿ ಎಂಬುದಾಗಿ ಘೋಷಿಸಲಾಗುವುದು.