ಕಾರು ಅಪಘಾತ ನನ್ನ ಜೀವನವನ್ನೇ ಬದಲಿಸಿತು: ರಿಷಭ್ ಪಂತ್
ರಿಷಭ್ ಪಂತ್ | Photo: X \ @CricCrazyJohns
ಹೊಸದಿಲ್ಲಿ: ಭೀಕರ ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಈಗ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.
2022ರ ಡಿಸೆಂಬರ್ 30ರಂದು ಹೊಸ ವರ್ಷಾಚರಣೆಗೆ ಮನೆಗೆ ತೆರಳಿ ಅಮ್ಮನಿಗೆ ಅಚ್ಚರಿ ಉಂಟು ಮಾಡಲು ಬಯಸಿದ್ದ ರಿಷಭ್ ಪಂತ್ ಅವರ ಪ್ರಯಾಣ ಭೀಕರ ಅಪಘಾತದಲ್ಲಿ ಕೊನೆಗೊಂಡಿತ್ತು. ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದ ಪಂತ್ ಅವರಿದ್ದ ಮರ್ಸಿಡೀಸ್ ಬೆಂಝ್ ಕಾರು ದಿಲ್ಲಿ-ಡೆಹ್ರಾಹೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಹೆದ್ದಾರಿಯ ವಿಭಜಕಕ್ಕೆ ಢಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆರಿಸುವ ಮುನ್ನವೇ ಹೊರಬಂದಿದ್ದ ಕಾರಣ ಪಂತ್ ಬದುಕುಳಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪಂತ್ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪಂತ್ ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಷ್ಟೇ ಅಂತ್ಯಗೊಂಡಿರುವ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿರುವ ಪಂತ್ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದರು.
ಶಿಖರ್ ಧವನ್ ಜೊತೆ ಟಾಕ್ ಶೋ ನಡೆಸಿದ ಪಂತ್ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಪಘಾತವು ನನ್ನ ಬದುಕನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ.
ಅಪಘಾತದ ಬಳಿಕ ನನಗೆ ಪ್ರಜ್ಞೆ ಬಂದಾಗ ನಾನು ಬದುಕುಳಿಯಲಿದ್ದೇನೆ ಎಂಬುದು ತಿಳಿದಿರಲಿಲ್ಲ. ಆದರೆ ದೇವರ ದಯೆದಿಂದ ಹೊಸ ಬದುಕು ಸಿಕ್ಕಿದೆ. ವೀಲ್ಚೇರ್ ನಲ್ಲಿ ಜನರನ್ನು ಎದುರಿಸುವ ಭಯದಿಂದಾಗಿ ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿಲ್ಲ. ಎರಡು ತಿಂಗಳು ಹಲ್ಲುಜ್ಜಲು ಸಾಧ್ಯವಾಗಿರಲಿಲ್ಲ. 7 ತಿಂಗಳುವರೆಗೂ ನೋವನ್ನು ಅನುಭವಿಸಿದ್ಧೇನೆ ಎಂದು ಪಂತ್ ಹೇಳಿದ್ದಾರೆ.