ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ದಿನಗಣನೆ ಆರಂಭ
PC : PTI
ಹೊಸದಿಲ್ಲಿ : ಜೂನ್ 1ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ರೋಚಕ ಪಂದ್ಯಗಳು ಹಾಗೂ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದ್ದು, ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಜೂನ್ 9ರಂದು ನ್ಯೂಯಾರ್ಕ್ನಲ್ಲಿ ನಡೆಯಲಿದೆ.
ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನ ಜಂಟಿ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಜೂನ್ 29ರಂದು ಬಾರ್ಬಡೋಸ್ ನಲ್ಲಿ ನಡೆಯಲಿದೆ.
ಭಾರತವು ಗ್ರೂಪ್ ಹಂತದಲ್ಲಿ ಜೂನ್ 5ರಂದು ಐರ್ಲ್ಯಾಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಆ ನಂತರ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅಮೆರಿಕ ಹಾಗೂ ಕೆನಡಾ ವಿರುದ್ಧವೂ ಸೆಣಸಾಡಲಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ 2022ರ ಅಕ್ಟೋಬರ್ನಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಕೊನೆಯ ಬಾರಿ ಟಿ20 ವಿಶ್ವಕಪ್ ಪಂದ್ಯವು ನಡೆದಿತ್ತು. 2024ರಲ್ಲಿ ಮತ್ತೊಮ್ಮೆ ರೋಚಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.
ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸುತ್ತಿದ್ದು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೇರಲಿವೆ.
ಭಾರತ ತಂಡ ಎ ಗುಂಪಿನಲ್ಲಿ ಪಾಕಿಸ್ತಾನ, ಅಮೆರಿಕ, ಕೆನಡಾ ಹಾಗೂ ಐರ್ಲ್ಯಾಂಡ್ನೊಂದಿಗೆ ಸ್ಥಾನ ಪಡೆದಿದೆ. ಪಂದ್ಯಗಳು ಅಮೆರಿಕದಾದ್ಯಂತ ಹಾಗೂ ವೆಸ್ಟ್ಇಂಡೀಸ್ ನ ಆರು ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಅಮೆರಿಕ ಹಾಗೂ ಕೆನಡಾ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಭಾರತವು ಜೂನ್ 5ರಂದು ಐರ್ಲ್ಯಾಂಡ್ ವಿರುದ್ಧ ಆಡಲಿದೆ.
ಸೂಪರ್-8 ಹಂತ ಜೂನ್ 19ರಿಂದ 24ರ ತನಕ ನಡೆಯಲಿದೆ. ಜೂನ್ 26 ಹಾಗೂ 27ರಂದು ಸೆಮಿ ಫೈನಲ್ ಪಂದ್ಯಗಳು, ಜೂನ್ 29ರಂದು ಬಾರ್ಬಡೋಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಜೂನ್ 8ರಂದು ಬಾರ್ಬಡೋಸ್ ನಲ್ಲಿ ಆಸ್ಟ್ರೇಲಿಯ ವಿರುದ್ದ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಜೂನ್ 1ರಿಂದ ಆರಂಭವಾಗಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕರಾಗಿದ್ದು, ಹಾರ್ದಿಕ್ ಪಾಂಡ್ಯ ಉಪ ನಾಯಕನಾಗಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಪಂತ್ 2022ರ ಭೀಕರ ಕಾರು ಅಪಘಾತದ ನಂತರ 16 ತಿಂಗಳ ವಿರಾಮದ ಬಳಿಕ ಟೀಮ್ ಇಂಡಿಯಾಕ್ಕೆ ವಾಪಸಾಗಿದ್ದಾರೆ.
ಯಜುವೇಂದ್ರ ಚಹಾಲ್ ಮೊದಲ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದು ತಂಡದ ಬೌಲಿಂಗ್ ಸರದಿಗೆ ಬಲ ನೀಡಲಿದ್ದಾರೆ.
ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು ಬ್ಯಾಟಿಂಗ್ ಸರದಿಗೆ ಬಲ ತುಂಬಲಿದ್ದಾರೆ.
ಜಸ್ಪ್ರೀತ್ ಬುಮ್ರಾ ನೇತೃತ್ವದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಮುಹಮ್ಮದ್ ಸಿರಾಜ್ ಅವರಿದ್ದಾರೆ. ಎದುರಾಳಿ ತಂಡಕ್ಕೆ ಸವಾಲೊಡ್ಡುವ ಭರವಸೆ ಮೂಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ನಾಲ್ವರು ಸ್ಪಿನ್ನರ್ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಅವರಿದ್ದಾರೆ. ಬೌಲಿಂಗ್ನಲ್ಲಿ ತಂಡದ ತಾಕತ್ತು ಪ್ರದರ್ಶಿಸಲು ಎದುರು ನೋಡುತ್ತಿದ್ದಾರೆ.
ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ಮೀಸಲು ಆಟಗಾರರಾಗಿ ನೇಮಿಸಲ್ಪಟ್ಟಿದ್ದು ಟೀಮ್ ಮ್ಯಾನೇಜ್ಮೆಂಟ್ ಗೆ ಹೆಚ್ಚುವರಿ ಆಯ್ಕೆಗಳನ್ನು ನೀಡಲಿದ್ದಾರೆ.
ಈ ಹಿಂದಿನ ಟೂರ್ನಮೆಂಟ್ನಲ್ಲಿ 16 ತಂಡಗಳು ಭಾಗವಹಿಸಿದ್ದವು. ಈ ಬಾರಿ 20 ತಂಡಗಳು ಸ್ಪರ್ಧಿಸುತ್ತಿದ್ದು ಟಿ20 ವಿಶ್ವಕಪ್ ಗೆ ರೋಚಕತೆ ನೀಡಲಿವೆ. ಕೆನಡಾ, ಅಮೆರಿಕ ಹಾಗೂ ಉಗಾಂಡ ಇದೇ ಮೊದಲ ಬಾರಿ ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದು ಸ್ಪರ್ಧಾವಳಿಗೆ ಹೊಸ ಆಯಾಮ ನೀಡಲಿವೆ.
ಟೂರ್ನಮೆಂಟ್ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನಲ್ಲಿ ನಡೆಯಲಿದ್ದು ಅಭಿಮಾನಿಗಳು ಕುತೂಹಲಭರಿತ ಪಂದ್ಯಗಳು ಹಾಗೂ ಮರೆಯಲಾರದ ಕ್ಷಣಗಳನ್ನು ನಿರೀಕ್ಷಿಸುತ್ತಿದ್ದಾರೆ. ಟೂರ್ನಿಯು ಜಾಗತಿಕಮಟ್ಟದಲ್ಲಿ ಟಿ20 ಕ್ರಿಕೆಟ್ ಗೆ ಹೊಸ ಆಯಾಮ ನೀಡಲಿದೆ.
ವಿಶ್ವಕಪ್ ಟಿ-20ಯಲ್ಲಿ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ
(ಭಾರತೀಯ ಕಾಲಮಾನ)
1 ಭಾರತ-ಐರ್ಲ್ಯಾಂಡ್-ಜೂನ್ 5(ನ್ಯೂಯಾರ್ಕ್) ರಾತ್ರಿ 8:00
2 ಭಾರತ-ಪಾಕಿಸ್ತಾನ-ಜೂನ್ 9(ನ್ಯೂಯಾರ್ಕ್), ರಾತ್ರಿ 8:00
3. ಭಾರತ-ಅಮೆರಿಕ-ಜೂನ್ 12(ನ್ಯೂಯಾರ್ಕ್)-ರಾತ್ರಿ 8:00
4. ಭಾರತ-ಕೆನಡಾ-ಜೂನ್ 15(ಲೌಡರ್ಹಿಲ್)-ರಾತ್ರಿ 8:00
ಟಿ20 ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡ
ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪ ನಾಯಕ), ಶಿವಂ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.