ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಡೇವಿಸ್ ಕಪ್ ತಂಡಕ್ಕೆ ಭಾರತೀಯ ಹೈಕಮಿಶನ್ ಆತಿಥ್ಯ
Photo: PTI
ಇಸ್ಲಾಮಾಬಾದ್ : ಇಸ್ಲಾಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು 60 ವರ್ಷಗಳಲ್ಲಿ ಮೊದಲ ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಕೈಗೊಂಡಿರುವ ರಾಷ್ಟ್ರೀಯ ಡೇವಿಸ್ ಕಪ್ ತಂಡಕ್ಕೆ ಭಾರತೀಯ ಹೈ ಕಮಿಶನ್ ಆತಿಥ್ಯ ನೀಡಿದೆ.
ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಶನ್ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಗೀತಿಕಾ ಶ್ರೀವಾಸ್ತವ ಅವರು ಬುಧವಾರ ಭಾರತೀಯ ಆಟಗಾರರು ಹಾಗೂ ಅಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಭಾರತೀಯ ಡೇವಿಸ್ ಕಪ್ ತಂಡ 1964ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು.
ರಾಜತಾಂತ್ರಿಕ ಉದ್ವಿಗ್ ನತೆಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಕ್ರೀಡಾ ಸಂಬಂಧಗಳಿಗೆ ಹೊಡೆತ ಬಿದ್ದಿದೆ.
ಇಲ್ಲಿ ಭಾರತೀಯ ತಂಡಕ್ಕೆ ಆತಿಥ್ಯ ನೀಡುವುದು ಗೌರವದ ವಿಚಾರವಾಗಿದೆ. ದೀರ್ಘ ಸಮಯದ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವ ಕಾರಣ ಇದು ಐತಿಹಾಸಿಕ ಸಂದರ್ಭವಾಗಿದೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಲಿ ಎಂದು ನಾವೆಲ್ಲರೂ ಶುಭ ಹಾರೈಸುತ್ತೇವೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಭಾರತದ ಆಟಗಾರರೊಂದಿಗೆ ಬೆರೆತ ಹೈಕಮಿಶನ್ ಅಧಿಕಾರಿಗಳು, ಪಂದ್ಯದ ಕುರಿತು ಪ್ರಶ್ನೆಗಳನ್ನು ಕೇಳಿದರು.
ಭಾರತ ಹಾಗೂ ಪಾಕಿಸ್ತಾನ ಫೆಬ್ರವರಿ 3-4ರಂದು ವರ್ಲ್ಡ್ ಗ್ರೂಪ್-1 ಪಂದ್ಯದಲ್ಲಿ ಹಣಾಹಣಿ ನಡೆಸಲಿವೆ. ವಿಜೇತ ತಂಡವು ಗ್ರೂಪ್-1ರಲ್ಲಿ ಉಳಿದುಕೊಳ್ಳುತ್ತದೆ ಹಾಗೂ ಪರಾಜಿತ ತಂಡವನ್ನು ಗ್ರೂಪ್-2ಕ್ಕೆ ಇಳಿಸಲಾಗುತ್ತದೆ.
ಡೇವಿಸ್ ಕಪ್ ಇತಿಹಾಸದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಒಂದೂ ಪಂದ್ಯವನ್ನು ಈ ತನಕ ಸೋತಿಲ್ಲ.