ಐಪಿಎಲ್, ಡಬ್ಲ್ಯುಪಿಎಲ್ ಫೈನಲ್ ಪಂದ್ಯಗಳಲ್ಲಿ ಹಲವು ಸಾಮ್ಯತೆ ಹಂಚಿಕೊಂಡ ನೆಟ್ಟಿಗರು
PC: PTI
ಚೆನ್ನೈ: ಈ ಬಾರಿಯ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಗೆ ರವಿವಾರ ತೆರೆ ಬಿದ್ದಿದೆ. ಟೂರ್ನಿಯ ಆರಂಭದಿಂದಲೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ 3ನೇ ಬಾರಿ ಚಾಂಪಿಯನ್ಪಟ್ಟಕೇರಿದೆ. ಆದರೆ ಈ ಪಂದ್ಯದ ಫಲಿತಾಂಶದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯೊಂದು ನಡೆಯುತ್ತಿದೆ.
ಈ ಪಂದ್ಯಕ್ಕೂ ಮೊದಲು ಇದೇ ವರ್ಷ ಫೆಬ್ರವರಿ-ಮಾಚ್ನಲ್ಲ್ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಟೂರ್ನಿಯ ಫೈನಲ್ ಪಂದ್ಯಕ್ಕೂ ಸಾಕಷ್ಟು ಸಾಮ್ಯತೆ ಇರುವುದನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.
ಐಪಿಎಲ್ ಫೈನಲ್ ನಲ್ಲಿ ಕೆಕೆಆರ್ ಹಾಗೂ ಎಸ್ ಆರ್ ಎಚ್ ಮುಖಾಮುಖಿಯಾಗಿದ್ದರೆ, ಡಬ್ಲ್ಯುಪಿಎಲ್ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ ನಡೆಸಿದ್ದವು.
ಐಪಿಎಲ್-ಡಬ್ಲ್ಯುಪಿಎಲ್ ಫೈನಲ್ ಪಂದ್ಯದ ಸಾಮ್ಯತೆಗಳು
-ಫೈನಲ್ ಸೋತ ತಂಡಗಳ ನಾಯಕರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದರು.
-ಡಬ್ಲ್ಯುಪಿಎಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ 18.3 ಓವರ್ ಗಳಲ್ಲಿ 113 ರನ್ ಗಳಿಸಿ ಆಲೌಟಾಗಿತ್ತು. ಐಪಿಎಲ್ ನಲ್ಲಿ ಹೈದರಾಬಾದ್ ತಂಡವೂ 18.3 ಓವರ್ ಗಳಲ್ಲಿ 113 ರನ್ ಗಳಿಸಿ ಸರ್ವಪತನ ಕಂಡಿತ್ತು.
-ಪ್ರಶಸ್ತಿ ಜಯಿಸಿದ ಆರ್ ಸಿ ಬಿ ಹಾಗೂ ಕೆಕೆಆರ್ ಕೇವಲ 2 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ತಲುಪಿದ್ದವು.
-ಪ್ರಶಸ್ತಿ ಗೆದ್ದ ಬೆಂಗಳೂರು ತಂಡದ ನಾಯಕಿ ಸ್ಮತಿ ಮಂಧಾನ ಹಾಗೂ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಭಾರತದವರು.
-ಡಬ್ಲ್ಯುಪಿಎಲ್ ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಮೆಗ್ ಲ್ಯಾನಿಂಗ್ ಹಾಗೂ ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯದವರು.
-ಲ್ಯಾನಿಂಗ್ ಹಾಗೂ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯ ತಂಡ ಐಸಿಸಿ ಟೂರ್ನಿಗಳ ಫೈನಲ್ ಪಂದ್ಯಗಳಲ್ಲಿ ಭಾರತ ತಂಡವನ್ನು ಎರಡು ಸಲ ಸೋಲಿಸಿತ್ತು. ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯ ಮಹಿಳಾ ತಂಡ 2020ರಲ್ಲಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯ ತಂಡ 2023ರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ 2023ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ವಿರುದ್ಧ ಗೆದ್ದಿತ್ತು.