ಮೂರನೇ ಏಕದಿನ: ಆಸ್ಟ್ರೇಲಿಯಕ್ಕೆ ಸುಲಭ ತುತ್ತಾದ ವೆಸ್ಟ್ಇಂಡೀಸ್
ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಕಾಂಗರೂ ಪಡೆ
Photo: NDTV
ಕ್ಯಾನ್ಬೆರ್ರಾ: ಆರಂಭಿಕ ಬ್ಯಾಟರ್ ಜಾಕ್ ಫ್ರೆಸರ್-ಮ್ಯಾಕ್ಗುರ್ಕ್ ಬಿರುಸಿನ ಬ್ಯಾಟಿಂಗ್(41 ರನ್, 18 ಎಸೆತ)ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡ ಕೇವಲ 6.5 ಓವರ್ಗಳಲ್ಲಿ ವೆಸ್ಟ್ಇಂಡೀಸ್ ವಿರುದ್ಧದ 3ನೇ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವನ್ನು 8 ವಿಕೆಟ್ ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡು ಕ್ಲೀನ್ ಸ್ವೀಪ್ ಸಾಧಿಸಿದೆ.
ಆತಿಥೇಯ ತಂಡ ಮೆಲ್ಬರ್ನ್ ನಲ್ಲಿ ಮೊದಲ ಪಂದ್ಯವನ್ನು 8 ವಿಕೆಟ್ನಿಂದಲೂ ಹಾಗೂ ಸಿಡ್ನಿಯಲ್ಲಿ 2ನೇ ಪಂದ್ಯವನ್ನು 83 ರನ್ನಿಂದ ಜಯಿಸಿ ಸರಣಿ ಗೆದ್ದುಕೊಂಡಿತ್ತು. ವೆಸ್ಟ್ಇಂಡೀಸ್ 3ನೇ ಪಂದ್ಯವನ್ನು ಕೇವಲ ಪ್ರತಿಷ್ಠೆಗಾಗಿ ಆಡಿತ್ತು.
ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಟಾಸ್ ಜಯಿಸಿ ವಿಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಜೋಶ್ ಹೇಝಲ್ವುಡ್, ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯಲ್ಲೂ ಆಸೀಸ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದ ವಿಂಡೀಸ್ 25ನೇ ಓವರ್ ನಲ್ಲಿ ಕೇವಲ 86 ರನ್ ಗಳಿಸಿ ಸರ್ವಪತನಗೊಂಡಿತು.
ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯವು 259 ಎಸೆತಗಳು ಬಾಕಿ ಇರುವಾಗಲೇ ಕ್ಷಿಪ್ರವಾಗಿ ರನ್ ಚೇಸ್ ಮಾಡಿ ಗಮನ ಸೆಳೆಯಿತು.
21ರ ಹರೆಯದ ಯುವ ಆಟಗಾರ ಫ್ರೆಸರ್-ಮ್ಯಾಕ್ಗುರ್ಕ್ ತಾನಾಡಿದ 2ನೇ ಪಂದ್ಯದಲ್ಲಿ 18 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ಗಳನ್ನು ಒಳಗೊಂಡ 41 ರನ್ ಗಳಿಸಿ ಅಲ್ಝಾರಿ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು. ಆ್ಯರೊನ್ ಹಾರ್ಡಿ(2 ರನ್)ಒಶಾನೆ ಥಾಮಸ್ಗೆ ವಿಕೆಟ್ ಒಪ್ಪಿಸಿದರು. ಜೋಶ್ ಇಂಗ್ಲಿಸ್ ಔಟಾಗದೆ 35 ರನ್ ಹಾಗೂ ಸ್ಮಿತ್ ಔಟಾಗದೆ 6 ರನ್ ಗಳಿಸಿ ಗೆಲುವಿನ ವಿಧಿ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್(4-21) , ಲ್ಯಾನ್ಸ್ ಮೊರಿಸ್(2-13)ಹಾಗೂ ಆಡಮ್ ಝಂಪಾ(2-14) ಶಿಸ್ತುಬದ್ಧ ದಾಳಿ ಸಂಘಟಿಸಿ ವಿಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಆರಂಭಿಕ ಬ್ಯಾಟರ್ ಜೋರ್ನ್ ಒಟ್ಲೆ(8 ರನ್)ಯವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಬಾರ್ಟ್ಲೆಟ್ ಆರಂಭಿಕ ಆಘಾತ ನೀಡಿದರು. ವಿಂಡೀಸ್ ಮೊದಲ 10 ಓವರ್ಗಳಲ್ಲಿ ಕೇವಲ 36 ರನ್ ಗಳಿಸಿತು.
ನಾಯಕ ಹೋಪ್(4 ರನ್) ಅವರು ಶಾನ್ ಅಬಾಟ್ ಗೆ ವಿಕೆಟ್ ಒಪ್ಪಿಸಿದಾಗ ವಿಂಡೀಸ್ 43 ರನ್ ಗೆ 3ನೇ ವಿಕೆಟ್ ಕಳೆದುಕೊಂಡಿತು. ಚೊಚ್ಚಲ ಪಂದ್ಯವನ್ನಾಡಿದ ಟೆಡ್ಡಿ ಬಿಶಪ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆಫ್ ಸ್ಪಿನ್ನರ್ ಆಡಮ್ ಝಂಪಾ ಬೌಲಿಂಗ್ ನಲ್ಲಿ ಅಬಾಟ್ಗೆ ಸುಲಭ ಕ್ಯಾಚ್ ನೀಡಿದ ಆರಂಭಿಕ ಆಟಗಾರ ಅಲಿಕ್ ಅಥನಾಝ್ 60 ಎಸೆತಗಳಲ್ಲಿ 32 ರನ್ ಗಳಿಸಿದರು. ವಿಂಡೀಸ್ ಪರ ಗರಿಷ್ಠ ಸ್ಕೋರ್ ಗಳಿಸಿದ ಅಥನಾಝ್ ವಿಕೆಟ್ ಪತನದ ನಂತರ ಇನ್ನೂ ಎರಡು ವಿಕೆಟ್ ಗಳು ಮೂರು ಎಸೆತಗಳ ಅಂತರದಲ್ಲಿ ಉದುರಿದವು. ರೊಮಾರಿಯೊ ಶೆಫರ್ಡ್(1 ರನ್) ಹಾಗೂ ಮ್ಯಾಥ್ಯೂ ಫೋರ್ಡ್(0) ಬೇಗನೆ ಔಟಾದರು. ಇನ್ನೂ ಎರಡು ವಿಕೆಟ್ ಪಡೆದ ಬಾರ್ಟ್ಲೆಟ್ ವಿಂಡೀಸ್ ನ ಬಾಲ ಕತ್ತರಿಸಿದರು.
ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು. ಬಾರ್ಟ್ಲೆಟ್ ಸರಣಿಯಲ್ಲಿ ಒಟ್ಟು 8 ವಿಕೆಟ್ ಗಳನ್ನು ಪಡೆದಿದ್ದಾರೆ.