ನಾಳೆ ಮೂರನೇ ಟಿ20 | ಝಿಂಬಾಬ್ವೆ ವಿರುದ್ಧ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿ ಭಾರತ
ಆರಂಭಿಕ ಸ್ಥಾನಕ್ಕಾಗಿ ಯಶಸ್ವಿ ಜೈಸ್ವಾಲ್-ಅಭಿಷೇಕ್ ಶರ್ಮಾ ಪೈಪೋಟಿ
PC : PTI
ಹರಾರೆ: ಶುಭಮನ್ ಗಿಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಝಿಂಬಾಬ್ವೆ ವಿರುದ್ಧ ಬುಧವಾರ ನಡೆಯಲಿರುವ ಮೂರನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. 2ನೇ ಪಂದ್ಯದಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ ಹಾಗೂ ತಂಡಕ್ಕೆ ವಾಪಸಾಗಿರುವ ಯಶಸ್ವಿ ಜೈಸ್ವಾಲ್ ಮಧ್ಯೆ ಆರಂಭಿಕನ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.
ಸರಣಿಯ ಅತ್ಯಂತ ನಿರ್ಣಾಯಕ ಪಂದ್ಯಕ್ಕೆ ಜೈಸ್ವಾಲ್, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ವಾಪಸಾತಿಯಿಂದಾಗಿ ಭಾರತೀಯ ತಂಡವೀಗ ಮತ್ತಷ್ಟು ಬಲಿಷ್ಠವಾಗಿದೆ. ಈ ಮೂವರು ಆಟಗಾರರು ಕಳೆದ ತಿಂಗಳು ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ಎರಡನೇ ಪಂದ್ಯದಲ್ಲಿ 100 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿರುವ ಭಾರತವು ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ಎಡಗೈ ಆರಂಭಿಕ ಆಟಗಾರ ಅಭಿಷೇಕ್ ತಾನಾಡಿದ ಎರಡನೇ ಪಂದ್ಯದಲ್ಲಿ 46 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದೀಗ 3ನೇ ಪಂದ್ಯದಲ್ಲೂ ಇನಿಂಗ್ಸ್ ಆರಂಭಿಸುವ ವಿಶ್ವಾಸದಲ್ಲಿದ್ದಾರೆ.
17 ಟಿ20 ಪಂದ್ಯಗಳಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳ ಸಹಿತ 161ಕ್ಕೂ ಅಧಿಕ ಸ್ಟ್ರೈಕ್ರೇಟ್ನಲ್ಲಿ 502 ರನ್ ಗಳಿಸಿರುವ ಜೈಸ್ವಾಲ್ ಅವರು ನಾಯಕ ಶುಭಮನ್ ಗಿಲ್ ಅವರ ಆರಂಭಿಕ ಜೊತೆಗಾರನಾಗಿದ್ದಾರೆ. ಅಭಿಷೇಕ್ ಟಿ20 ತಂಡದ ಪ್ರಮುಖ ಮೀಸಲು ಆಟಗಾರನಾಗಿದ್ದಾರೆ.
ಐತಿಹಾಸಿಕ ಇನಿಂಗ್ಸ್ನ ನಂತರ ಬ್ಯಾಟರ್ ಗಳು ಮುಂದಿನ ಪಂದ್ಯದಿಂದ ಕೈಬಿಡಲ್ಪಡುವುದು ಸಾಮಾನ್ಯ ಸಂಗತಿಯಾಗಿದೆ. ಮನೋಜ್ ತಿವಾರಿ 2011ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಮೊತ್ತ ಮೊದಲ ಏಕದಿನ ಶತಕ ಹಾಗೂ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿವಳಿ ಶತಕ ಗಳಿಸಿದ ನಂತರ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ.
14 ವರ್ಷದೊಳಗಿನ ಕ್ರಿಕೆಟ್ನಿಂದಲೂ ತನ್ನ ಆಪ್ತ ಗೆಳೆಯನಾಗಿರುವ ಅಭಿಷೇಕ್ ರನ್ನು ಕೈಬಿಡುವುದಕ್ಕೆ ಗಿಲ್ ಹಿಂದೇಟು ಹಾಕುವ ಸಾಧ್ಯತೆಯಿದೆ.
ಇಬ್ಬರು ಎಡಗೈ ಬ್ಯಾಟರ್ ಗಳ ಪೈಕಿ ಒಬ್ಬರು ಮೊದಲು ಬ್ಯಾಟ್ ಮಾಡುವ ಸಾಧ್ಯತೆಯಿದೆ. ರಾಜಸ್ಥಾನ ರಾಯಲ್ಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಂಜು ಸ್ಯಾಮ್ಸನ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಋತುರಾಜ್ ಗಾಯಕ್ವಾಡ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆಯಿದೆ.
ಮೊದಲೆರಡು ಪಂದ್ಯಗಳಿಗೆ ಮಾತ್ರ ಆಯ್ಕೆಯಾಗಿದ್ದ ಬಿ.ಸಾಯಿ ಸುದರ್ಶನ್ ಸ್ಥಾನಕ್ಕೆ ಜೈಸ್ವಾಲ್ ಆಡುವ 11ರ ಬಳಗ ಸೇರಬಹುದು. ವಿಕೆಟ್ ಕೀಪರ್ ಧ್ರುವ್ ಜುರೆಲ್ ಬದಲಿಗೆ ಸ್ಯಾಮ್ಸನ್ ಆಡಲಿದ್ದಾರೆ.
ಟಿ20 ವಿಶ್ವಕಪ್ನ ಆಡುವ 11ರ ಬಳಗದಲ್ಲಿ ಆಡಿರುವ ಏಕೈಕ ಆಟಗಾರ ಶಿವಂ ದುಬೆ ಅವರು ರಿಯಾನ್ ಪರಾಗ್ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಭಾರತವು ಝಿಂಬಾಬ್ವೆ ಸ್ಪಿನ್ನರ್ಗಳಿಗೆ ಸವಾಲಾಗುವ ನಿರೀಕ್ಷೆ ಇದೆ.
ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 115 ರನ್ ಗಳಿಸಿದ್ದ ಝಿಂಬಾಬ್ವೆ ತಂಡ 235 ರನ್ ಚೇಸ್ ವೇಳೆ ಕೇವಲ 134 ರನ್ ಗಳಿಸಿತ್ತು. ಈ ಮೂಲಕ ಬ್ಯಾಟಿಂಗ್ನಲ್ಲಿ ಝಿಂಬಾಬ್ವೆ ನಿರಾಸೆಗೊಳಿಸಿತ್ತು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ನಲ್ಲಿ ಸ್ಪಿನ್ನರ್ಗಳು ಅಲ್ಪಸ್ವಲ್ಪ ಬೌನ್ಸ್ ಪಡೆಯುತ್ತಿದ್ದು ರವಿ ಬಿಷ್ಣೋಯ್(8 ಓವರ್ಗಳಲ್ಲಿ 6/24) ಹಾಗೂ ವಾಶಿಂಗ್ಟನ್ ಸುಂದರ್(8 ಓವರ್ಗಳಲ್ಲಿ 3/39)ಎದುರಾಳಿ ಝಿಂಬಾಬ್ವೆಗೆ ಸವಾಲಾಗಿದ್ದರು.
ಯುವ ಆಟಗಾರರನ್ನು ಒಳಗೊಂಡ ಪ್ರವಾಸಿ ತಂಡವು ತನ್ನ ಮೊದಲ ಪಂದ್ಯದಲ್ಲಿ 13 ರನ್ನಿಂದ ಸೋತ ನಂತರ ಉಪಯುಕ್ತ ಪಾಠ ಕಲಿತಿದೆ. ಐವರು ಸ್ಪೆಷಲಿಸ್ಟ್ ಬೌಲರ್ಗಳಿಲ್ಲದೆ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ಇದರ ಲಾಭವನ್ನು ಪಡೆದಿತ್ತು.
*ಪಂದ್ಯ ಆರಂಭ ಸಮಯ: ಸಂಜೆ 4:30