ಮೂರನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ನ್ಯೂಝಿಲ್ಯಾಂಡ್ ಮೇಲುಗೈ
PC : AP/PTI
ಹ್ಯಾಮಿಲ್ಟನ್: ಮೂರನೇ ಟೆಸ್ಟ್ ಪಂದ್ಯದ 2ನೇ ದಿನವಾದ ರವಿವಾರ ನ್ಯೂಝಿಲ್ಯಾಂಡ್ ವಿರುದ್ಧ 340 ರನ್ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಸರಣಿ ಕ್ಲೀನ್ಸ್ವೀಪ್ಗೈಯ್ಯುವ ಕನಸು ಬಹುತೇಕ ಭಗ್ನವಾಗಿದೆ.
ಆತಿಥೇಯ ಕಿವೀಸ್ ತಂಡವು ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ ಕೇವಲ 143 ರನ್ಗೆ ಆಲೌಟ್ ಮಾಡಿದ್ದು, ಆ ನಂತರ ತನ್ನ ಎರಡನೇ ಇನಿಂಗ್ಸ್ ಆರಂಭಿಸಿ ದಿನದಾಟದಂತ್ಯಕ್ಕೆ 3 ವಿಕೆಟ್ಗಳ ನಷ್ಟಕ್ಕೆ 136 ರನ್ ಗಳಿಸಿ ಒಟ್ಟು 360 ರನ್ ಮುನ್ನಡೆಯಲ್ಲಿದೆ.
ಕೇನ್ ವಿಲಿಯಮ್ಸನ್(50 ರನ್)ಹಾಗೂ ರಚಿನ್ ರವೀಂದ್ರ(2 ರನ್)ಕ್ರೀಸ್ನಲ್ಲಿದ್ದಾರೆ.
ನಾಯಕ ಟಾಮ್ ಲ್ಯಾಥಮ್(19 ರನ್)ನಿರ್ಗಮನದ ನಂತರ ವಿಲಿಯಮ್ಸನ್ ಅವರು ವಿಲ್ ಯಂಗ್(60 ರನ್)ಜೊತೆ 2ನೇ ವಿಕೆಟ್ಗೆ 89 ರನ್ ಜೊತೆಯಾಟ ನಡೆಸಿದರು. ವಿಲ್ ಒ ರೂರ್ಕಿ(0)ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ಗೆ(2-45)ವಿಕೆಟ್ ಒಪ್ಪಿಸಿದರು.
ಕಿವೀಸ್ ಕೊನೆಯ ಸೆಶನ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಲೆಂಡ್ ತಂಡವು ಲಂಚ್ ಹಾಗೂ ಟೀ ವಿರಾಮದ ನಡುವೆ 66 ರನ್ಗೆ ಕೊನೆಯ 8 ವಿಕೆಟ್ಗಳನ್ನು ಕಳೆದುಕೊಂಡಿತು.
ಕಿವೀಸ್ ತಂಡದ ವೇಗದ ಬೌಲರ್ ಒ ರೂರ್ಕಿ(3-33)ಲಂಚ್ ವಿರಾಮದ ನಂತರ ಮೂರು ಪ್ರಮುಖ ವಿಕೆಟ್ಗಳನ್ನು ಪಡೆದರು. ಮ್ಯಾಟ್ ಹೆನ್ರಿ(4-48) ಹಾಗೂ ಮಿಚೆಲ್ ಸ್ಯಾಂಟ್ನರ್(3-7)ಕೆಳ ಸರದಿಯ ಕುಸಿತಕ್ಕೆ ಕಾರಣರಾದರು.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿ ಭರ್ಜರಿ ಗೆಲುವಿಗೆ ನೆರವಾಗಿದ್ದ ಬ್ರೂಕ್ ಕೇವಲ ಒಂದು ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ಸರ್ವಾಧಿಕ ಸ್ಕೋರ್ ಗಳಿಸಿದ ರೂಟ್(32 ರನ್)18ನೇ ಓವರ್ನಲ್ಲಿ ಒ ರೂರ್ಕಿಗೆ ಔಟಾದರು.
ಒಲಿ ಪೋಪ್(24 ರನ್)ಹಾಗೂ ಸ್ಟೋಕ್ಸ್(27 ರನ್)6ನೇ ವಿಕೆಟ್ಗೆ 52 ರನ್ ಸೇರಿಸಿದರು. ಆಗ ಪೋಪ್ ಹಾಗೂ ಸ್ಟೋಕ್ಸ್ ವಿಕೆಟನ್ನು ಉರುಳಿಸಿದ ಸ್ಯಾಂಟ್ನರ್ ಕಿವೀಸ್ಗೆ ಮೇಲುಗೈ ಒದಗಿಸಿದರು.
ಇಂಗ್ಲೆಂಡ್ನ ಕೊನೆಯ 5 ವಿಕೆಟ್ಗಳು 9 ರನ್ಗೆ ಉರುಳಿದವು. ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್ನಲ್ಲಿ 204 ರನ್ ಮುನ್ನಡೆ ಪಡೆದಿದ್ದರೂ ಫಾಲೋ-ಆನ್ ವಿಧಿಸುವ ಅವಕಾಶ ಬಳಸಿಕೊಳ್ಳಲಿಲ್ಲ.
ಇದಕ್ಕೂ ಮೊದಲು 9 ವಿಕೆಟ್ಗಳ ನಷ್ಟಕ್ಕೆ 315 ರನ್ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಝಿಲ್ಯಾಂಡ್ ತಂಡವು 347 ರನ್ಗೆ ಆಲೌಟಾಯಿತು. ಮ್ಯಾಥ್ಯೂ ಪಾಟ್ಸ್(4-90)ಯಶಸ್ವಿ ಪ್ರದರ್ಶನ ನೀಡಿದರು.